
ನವಜಾತ ಶಿಶುವನ್ನು ಚೀಲದಲ್ಲಿಟ್ಟು ಬಿಟ್ಟು ಹೋದ ಅಪರಿಚಿತರು
ಶಿವಮೊಗ್ಗ ನಗರದ ಹೊರವಲಯದಲ್ಲಿ ಪುಟ್ಟ ಮಗುವೊಂದನ್ನು ಚೀಲದಲ್ಲಿಟ್ಟು ಹೋಗಿರುವ ಘಟನೆಯೊಂದು ನಡೆದಿದೆ.
ಶಿವಮೊಗ್ಗ ನಗರದ ಶ್ರೀರಾಮಪುರದ ಬಳಿಯಲ್ಲಿ ನವಜಾತ ಶಿಶುವೊಂದನ್ನು ಕೈ ಚೀಲದಲ್ಲಿ ಇಟ್ಟು ಹೋಗಿದ್ದಾರೆ. ಸಾಗರ ರಸ್ತೆಯ ಸಮೀಪದಲ್ಲಿಯೇ ಮಗುವನ್ನ ಬಿಟ್ಟು ಹೋಗಲಾಗಿದೆ. ಸ್ಥಳೀಯರು ಮಗುವನ್ನ ಗಮನಿಸಿ ತಕ್ಷಣವೇ ಆರೈಕೆ ಮಾಡಿದ್ದಾರೆ. ಮಗುವಿಗೆ ಬಿಸಿ ನೀರು ತಂದು ಸ್ನಾನ ಮಾಡಿಸಿ, ಚಳಿಯಾಗದಿರಲೆಂದು ಮಪ್ಲರ್ ಕಟ್ಟಿದ್ದಾರೆ. ಪಂಚೆಯಲ್ಲಿ ಮಗುವನ್ನ ಸುತ್ತಿ , ಅದಕ್ಕೊಂದು ಚಿಕ್ಕ ಡ್ರೆಸನ್ನ ಸಹ ಹಾಕಿದ್ದಾರೆ. ಸ್ಥಳೀಯ ತಾಯಂದಿರು, ಅಜ್ಜಿಯಂದಿರು ಒಟ್ಟಾಗಿ ಮಗುವಿಗೆ ಆ ಕ್ಷಣಕ್ಕೆ ಸಿಗಬೇಕಿದ್ದ ಆಸರೆಯನ್ನು ನೀಡಿದ್ದರು. ತಮ್ಮ ಮಡಿಲ್ಲಲೆ ಮಗುವನ್ನ ಮಲಗಿಸಿಕೊಂಡು, ಮಗುವಿನ ಆರೈಕೆ ಮಾಡಿದ್ದಾರೆ. ಹೀಗೆ ಮಗುವನ್ನು ನೋಡಿಕೊಳ್ಳುತ್ತಿರುವಾಗಲೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಲಾಗಿದೆ.
ಮಕ್ಕಳ ಸಹಾಯವಾಣಿಯವರು ಅಗತ್ಯ ಆಂಬುಲೆನ್ಸ್‌ನೊಂದಿಗೆ ಸ್ಥಳಕ್ಕೆ ಬರುವಷ್ಟರಲ್ಲಿ ಮಗು ಆದಷ್ಟು ಚೇತರಿಸಿಕೊಂಡಿತ್ತು. ಬಳಿಕ ಸ್ಥಳೀಯರು ಮಗುವನ್ನ ಮಕ್ಕಳ ಸಹಾಯವಾಣಿ ಅಧಿಕಾರಿಗಳಿಗೆ ನೀಡಿದ್ದಾರೆ. ಆ ಬಳಿಕ ಮಗುವನ್ನ ಮೆಗ್ಗಾನ್ ಗೆ ಕರೆತಂದು ಅಲ್ಲಿ ದಾಖಲಿಸಿದ್ದಾರೆ.
ಆರೋಗ್ಯವಾಗಿದ್ದ ಮಗು ಸದ್ಯ ಅಧಿಕಾರಿಗಳ ಸುಪರ್ಧಿಯಲ್ಲಿ ಮೆಗ್ಗಾನ್‌ನಲ್ಲಿ ದಾಖಲಾಗಿದೆ.
ಇನ್ನೊಂದೆಡೆ ಅಧಿಕಾರಿಗಳು ಮಗುವನ್ನ ಬಿಟ್ಟು ಹೋದವರ ಬಗ್ಗೆ ಪರಿಶೀಲನೆ ನಡೆಸ್ತಿದ್ದಾರೆ.
