10 ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುತ್ತಿರುವ ಮುಸ್ಲಿಂ ವ್ಯಕ್ತಿ
ರಾಯಚೂರು: ಜಿಲ್ಲೆಯ ದೇವದುರ್ಗ ಪಟ್ಟಣದ ಗೌರಂಪೇಟೆ ನಿವಾಸಿ ಬಾಬು ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಯ ದರ್ಶನ ಪಡೆದಿದ್ದಾರೆ. 10 ವರ್ಷಗಳಿಂದಲೂ ಇವರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸುತ್ತಿದ್ದಾರೆ.
ಈ ವರ್ಷ ಡಿ.28ರಂದು ಶಬರಿಮಲೆ ಹತ್ತಿರದ ಪಂಪ ಸರೋವರದ ಬಳಿ ಸಂಪ್ರದಾಯದಂತೆ ಮಾಲೆ ಧರಿಸಿ, ಇರುಮುಡಿ ಕಟ್ಟಿಕೊಂಡು ಡಿ.31ರಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
2014ರಿಂದ ಇಲ್ಲಿಯವರೆಗೆ ಪ್ರತಿವರ್ಷ ತಮ್ಮ ವಾರ್ಡ್‌ನ ಗೆಳೆಯರ ಬಳಗದವರೊಂದಿಗೆ ಬಾಬು ಅವರು ಮಾಲೆ ಧರಿಸಿಕೊಂಡು ಬರುತ್ತಿದ್ದಾರೆ., ”ನಮ್ಮ ಧರ್ಮದ ಆಚರಣೆಗಳನ್ನು ಮಾಡುವುದರ ಜೊತೆಗೆ 2014ರಿಂದ ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸುತ್ತಾ ಇರುಮುಡಿಯೊಂದಿಗೆ ಸ್ವಾಮಿಯ ದರ್ಶನ ಪಡೆಯುತ್ತಿದ್ದೇನೆ. ಇದರಿಂದ ನನಗೆ ಸುಖ ಶಾಂತಿ, ನೆಮ್ಮದಿ ಹಾಗೂ ಒಳ್ಳೆಯದಾಗಿದೆ” ಎಂದರು.
‘ಧರ್ಮದ ಮೇಲಿನ ಅತಿಯಾದ ಪ್ರೀತಿಯಿಂದ ಭಾವೈಕ್ಯತೆ ದೂರ’:
”ಪ್ರತೀ ಗ್ರಾಮದಲ್ಲಿ ಭಾವೈಕ್ಯತೆ ಇರಬೇಕು. ಗತಕಾಲದಿಂದಲೂ ನಾವು ಭಾವೈಕ್ಯತೆಯಿಂದ ಬದುಕುತ್ತಿದ್ದೇವೆ. ಆದರೆ, ಇತ್ತೀಚೆಗೆ ಮನುಷ್ಯ ತನ್ನ ಧರ್ಮವನ್ನು ಅತಿಯಾಗಿ ಪ್ರೀತಿಸುತ್ತಿರುವುದರಿಂದ ಭಾವೈಕ್ಯತೆ ದೂರವಾಗುತ್ತಿದೆ. ಇದು ಸಮಾಜಕ್ಕೆ ಮಾರಕ ಎನ್ನುವುದು ನನ್ನ ಅಭಿಪ್ರಾಯ. ಅತಿಹೆಚ್ಚು ಯಾರು ತನ್ನ ಧರ್ಮವನ್ನು ಪ್ರೀತಿಸುತಾರೋ ಅವರು ಮೊದಲನೇ ಕೋಮುವಾದಿ ಎಂದು ಮಹಮ್ಮದ್ ಪೈಗಂಬರ್ ಕೂಡಾ ಹೇಳಿದ್ದಾರೆ. ನಾವು ಎಲ್ಲ ಧರ್ಮಗಳ ಬಗ್ಗೆ ಗೌರವ ಹೊಂದಿದರೆ ಮಾತ್ರ ಭಾವೈಕ್ಯತೆ ಉಳಿಯುತ್ತದೆ” ಎಂದು ಬಾಬು ಹೇಳಿದರು.