ರಾಮನಸರ ನಾಗದೇವತೆ ಕ್ಷೇತ್ರದಲ್ಲಿ ಷಷ್ಠಿ, ಜಾತ್ರಾ ಮಹೋತ್ಸವ ಸಂಪನ್ನ
ಹೊಸನಗರ ತಾಲೂಕಿನ ಗರ್ತಿಕೆರೆ ಸಮೀಪದ ರಾಮನಸರ ಶ್ರೀನಾಗದೇವತೆ, ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ಸುಬ್ರಹ್ಮಣ್ಯ ಷಷ್ಠಿ ಮತ್ತು ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶನಿವಾರದಂದು ಗಣಹೋಮ, ಪಂಚ ವಿಂಶತಿ, 108 ಕಲಶಾಭಿಷೇಕ, ಕಲಾತತ್ವ ಅಧಿವಾಸ ಹೋಮ, ಆಶ್ಲೇಷಾ ಬಲಿ ನಡೆಯಿತು.
ವೇದಮೂರ್ತಿ ವಿದ್ವಾನ್ ಮುರಳೀಧರ ಕೆದ್ಲಾಯ ಹಾಗೂ ಪ್ರಧಾನ ಅರ್ಚಕ ಸುರೇಶ್ ಭಟ್ ಅವರ ತಂಡ ಪೂಜಾ ವಿಧಿವಿಧಾನಗಳ ನೆರವೇರಿಸಿದರು. ಉಡುಪಿ ಜಿಲ್ಲೆ ಶ್ರೀನರಸಿಂಹತೀರ್ಥ ಸಂಸ್ಥಾನ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಅರಸೀಕೆರೆ ಶ್ರೀ ಲಕ್ಷ್ಮೀ ನರಸಿಂಹ ಪಂಚಾಯತನ ಕ್ಷೇತ್ರದ ಅವಧೂತ ಶ್ರೀಸತೀಶ ಶರ್ಮ ಅವರ ಪಾದಪೂಜೆ ಹಾಗೂ ಆಶೀರ್ವಚನ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನದ ವೇಳೆಗೆ ಶ್ರೀಕ್ಷೇತ್ರ ಆವರಣದಿಂದ ಹುಂಚದಕಟ್ಟೆ ಗರ್ತಿಕೆರೆ ಮಾರ್ಗದಲ್ಲಿ ವಿವಿಧ ಕಲಾತಂಡಗಳ ಕಲಾ ಪ್ರದರ್ಶನದೊಂದಿಗೆ ರಾಜಬೀದಿ ಉತ್ಸವ ನಡೆಯಿತು. ಸಂಜೆ ಪೂಜಾ ವಿಧಾನಗಳೊಂದಿಗೆ ದೀಪೋತ್ಸವ ನೆರವೇರಿತು. ದೀಪೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಿಂದ ನಡೆದ ಐದು ಮೇಳಗಳ ಕೂಡಾಟ ಯಕ್ಷಗಾನ ಪ್ರದರ್ಶನ ನೆರೆದಿದ್ದ ಭಕ್ತರ ಗಮನ ಸೆಳೆಯಿತು.
ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರ ಧಾರ್ಮಿಕ ಸಭೆಯ ಉದ್ಘಾಟಿಸಿ ಮಾತನಾಡಿ, ನೊಂದ ಮನಸ್ಸುಗಳಿಗೆ ಧಾರ್ಮಿಕ ಕ್ಷೇತ್ರಗಳು ಬದುಕುವ ಪ್ರೇರಣೆ ನೀಡುತ್ತವೆ. ಶ್ರೀ ಕ್ಷೇತ್ರ ರಾಮನಸರ ಸಾವಿರಾರು ಜನರ ಬದುಕಿಗೆ ಚೈತನ್ಯ ತುಂಬಿದೆ ಎಂದು ಬಣ್ಣಿಸಿದರು. ಶ್ರೀ ಕ್ಷೇತ್ರ ರಾಮನಸರ ಪವಾಡ ಸದೃಶ್ಯವಾಗಿ ಸಾಕಷ್ಟು ಬದಲಾವಣೆ ಕಂಡಿದ್ದು, ಜನರಲ್ಲಿರುವ ನೋವುಗಳ ನಿವಾರಿಸಿ ಬದುಕುವ ಹುಮ್ಮಸ್ಸು ಶ್ರೀಕ್ಷೇತ್ರ ನೀಡುತ್ತಿದೆ. ಜತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಸುವ ಕಾರ್ಯವನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ವೇದಮೂರ್ತಿ ವಿದ್ವಾನ್ ಮುರಳೀಧರ ಕೆದ್ಲಾಯ ಆಶೀರ್ವಚನ ನೀಡಿದರು. ದೇವಸ್ಥಾನ ಮುಖ್ಯಸ್ಥರಾದ ಸುನಂದಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮದರ್ಶಿಗಳಾದ ಎನ್.ಕೆ.ನಾಗರಾಜ್, ಚಂದ್ರಶೇಖರ್ (ಪುಟ್ಟಣ್ಣ), ಹುಂಚದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ವೆಂಕಟೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎಸ್.ಮಹೇಶ್, ಪ್ರಧಾನ ಅರ್ಚಕ ಸುರೇಶ್ ಭಟ್, ಸಂಚಾಲಕರಾದ ಗಣೇಶ್, ಪೊಲೀಸ್ ಸಬ್ ಇನ್ಸ್‌ಪೆ ಕ್ಟರ್ ಶ್ರೀನಿವಾಸ್ ಸೇರಿ ಅನೇಕರಿದ್ದರು. ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕೆ.ವಿ.ಅರವಿಂದ್, ರಾಷ್ಟ್ರಮಟ್ಟದ ಯೋಗಪಟು ಕಾವ್ಯಾ, ಬನಶಂಕರಿ ಕಲಾತಂಡದ ದಿನೇಶ್ ಎಡಮೊಗೆ ಅವರನ್ನು ಸನ್ಮಾನಿಸಲಾಯಿತು.