ಎಂಜಿನಿಯರಿಂಗ್‌ ಸೀಟ್‌ ಬ್ಲಾಕಿಂಗ್‌’ ಜಾಲದ ಹತ್ತು ಆರೋ‍ಪಿಗಳ ಬಂಧನ

ಎಂಜಿನಿಯರಿಂಗ್‌ ಸೀಟ್‌ ಬ್ಲಾಕಿಂಗ್‌’ ಜಾಲದ ಹತ್ತು ಆರೋ‍ಪಿಗಳ ಬಂಧನ

ಸರ್ಕಾರದ ಕೋಟಾದಡಿ ಬರುವ ಎಂಜಿನಿಯರಿಂಗ್‌ ಸೀಟುಗಳನ್ನು ಬ್ಲಾಕ್‌ ಮಾಡಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು ಅರ್ಹ ಅಭ್ಯರ್ಥಿಗಳಿಗೆ ವಂಚಿಸುತ್ತಿದ್ದ ಆರೋಪದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹೊರಗುತ್ತಿಗೆ ನೌಕರ, ಮೂವರು ಮಧ್ಯವರ್ತಿಗಳು ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಸಿಬ್ಬಂದಿ ಸೇರಿದಂತೆ ಹತ್ತು ಮಂದಿಯನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆಇಎ ಹೊರಗುತ್ತಿಗೆ ನೌಕರ, ಯಶವಂತಪುರದ ನಿವಾಸಿ ಬಿ.ಎಸ್‌.ಅವಿನಾಶ್‌ (36), ತುಮಕೂರಿನ ಚಿಕ್ಕನಾಯಕನಹಳ್ಳಿ ನಿವಾಸಿ ಟಿ.ಎಂ.ಶ್ರೀಹರ್ಷ(42), ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಎಸ್‌.ಆರ್‌.ಪ್ರಕಾಶ್‌ (42), ಶಶಿಕುಮಾರ್‌, ಪುರುಷೋತ್ತಮ್‌, ಎಸ್‌.ಎಲ್‌.ಪುನೀತ್‌, ಕನಕಪುರದ ಸಾತನೂರಿನ ಎಸ್‌.ಸಿ.ರವಿಶಂಕರ್‌, ಜಾರ್ಖಂಡ್‌ ನಿವಾಸಿಗಳಾದ ದಿಲ್‌ಶಾದ್‌ ಆಲಂ (33), ನೌಶದ್ ಆಲಂ (42), ಆರ್.ಜಿ.ತಿಲಕ್‌ (60) ಬಂಧಿತರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್‌ ಗದ್ಯಾಳ ನೀಡಿದ ದೂರು ಆಧರಿಸಿ, ನವೆಂಬರ್‌ 13ರಂದು ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿತ್ತು. ತನಿಖೆ ವೇಳೆ ಲಭಿಸಿದ ಸಾಕ್ಷ್ಯಾಧಾರ ಆಧರಿಸಿ ಆರೋಪಿಗಳನ್ನು ನಗರದ ಮೆಜೆಸ್ಟಿಕ್‌, ದೇವನಹಳ್ಳಿ, ಕಡೂರು ಸೇರಿದಂತೆ ವಿವಿಧೆಡೆ ಬಂಧಿಸಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅರೋಪಿಗಳಿಂದ 13 ಮೊಬೈಲ್‌ ಫೋನ್, ಮೂರು ಲ್ಯಾಪ್‌ಟಾಪ್‌ ಹಾಗೂ ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿವೆ.

ಪ್ರಕರಣದ ಪ್ರಮುಖ ಆರೋಪಿ ಅವಿನಾಶ್‌. ಈತ ರೂಪಿಸಿದ ಯೋಜನೆ ಹಾಗೂ ನೀಡಿದ ಮಾಹಿತಿಯಂತೆ ಆರೋಪಿಗಳು ಸೀಟ್‌ ಬ್ಲಾಕಿಂಗ್‌ ದಂಧೆ ನಡೆಸುತ್ತಿದ್ದರು. ದಿಲ್‌ಶಾದ್‌ ಆಲಂ, ನೌಶದ್ ಆಲಂ ಹಾಗೂ ಆರ್.ಜಿ.ತಿಲಕ್‌ ಪ್ರಕರಣದಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದರು ಎಂದು ಪೊಲೀಸರು ಹೇಳಿದರು.

’52 ಎಂಜಿನಿಯರಿಂಗ್‌ ಅಭ್ಯರ್ಥಿಗಳ ಲಾಗಿನ್‌, ಪಾಸ್‌ವರ್ಡ್‌ ಹಾಗೂ ಸೀಕ್ರೆಟ್‌ ಕೀ ಅನ್ನು ಆರೋಪಿಗಳು ಅನಧಿಕೃತವಾಗಿ ಪಡೆದುಕೊಂಡಿದ್ದರು. ಅಭ್ಯರ್ಥಿಗಳ ಪರವಾಗಿ ಆರೋಪಿಗಳೇ ಆಯ್ಕೆ ನಮೂದಿಸುತ್ತಿದ್ದರು. ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜು, ಆಕಾಶ್ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌, ನ್ಯೂ ಹೊರೈಜಾನ್‌ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸರ್ಕಾರದ ಕೋಟಾದಡಿ ಲಭ್ಯವಿದ್ದ ಎಂಜಿನಿಯರಿಂಗ್‌ ಸೀಟುಗಳನ್ನು ಬ್ಲಾಕ್‌ ಮಾಡಿ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟಿದ್ದರು’ ಎಂದು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ತಿಳಿಸಿದರು.

ಹೊರ ರಾಜ್ಯದಲ್ಲೂ ವಂಚನೆ: ‘ಸಿಇಟಿಯಲ್ಲಿ ಅರ್ಹ ಅಭ್ಯರ್ಥಿಗಳ ಮಾಹಿತಿಯನ್ನು ಇತರೆ ಆರೋಪಿಗಳಿಗೆ ಬಂಧಿತ ಅವಿನಾಶ್ ಮಾಹಿತಿ ನೀಡುತ್ತಿದ್ದ. ಬಳಿಕ ಉಳಿದ ಒಂಬತ್ತು ಮಂದಿ ವಂಚನೆ ಎಸಗುತ್ತಿದ್ದರು. ಖಾಸಗಿ ಕಾಲೇಜುಗಳಲ್ಲಿ ಸೀಟು ಕೊಡಿಸಿ ಲಕ್ಷಾಂತರ ರೂಪಾಯಿ ಪಡೆದುಕೊಳ್ಳುತ್ತಿದ್ದರು. ಗೋವಾ, ಶಿವಮೊಗ್ಗ, ದಾವಣಗೆರೆ, ಕಡೂರು ಹಾಗೂ ಬೆಂಗಳೂರಿನ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟಿದ್ದಾರೆ’ ಎಂದು ಅವರು ಹೇಳಿದರು.

₹60 ಲಕ್ಷದವರೆಗೆ ಮಾರಾಟ ಪ್ರಮುಖ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕಂಪ್ಯೂಟರ್‌ ಸೈನ್ಸ್‌ ಕೃತಕ ಬುದ್ಧಿಮತ್ತೆ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್ ಸೇರಿದಂತೆ ಕೆಲವು ಕೋರ್ಸ್‌ಗಳಿಗೆ ಬಹಳ ಬೇಡಿಕೆ ಇದೆ. ಅದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳ ದತ್ತಾಂಶವನ್ನು ಸಂಗ್ರಹಿಸಿಕೊಂಡ ಆರೋಪಿಗಳು ಅವರ ಹೆಸರಲ್ಲಿ ಬಹು ಬೇಡಿಕೆಯ ಕೋರ್ಸ್‌ಗಳಲ್ಲಿ ಸೀಟುಗಳನ್ನು ಸರ್ಕಾರದ ಕೋಟಾದಡಿ ಬ್ಲಾಕ್‌ ಮಾಡುತ್ತಿದ್ದರು. ಕೊನೆಯ ಸುತ್ತಿನವರೆಗೂ ಸೀಟು ಹಿಡಿದಿಟ್ಟುಕೊಳ್ಳುತ್ತಿದ್ದರು. ಅಂತಿಮ ಪ್ರಕ್ರಿಯೆ ಮುಗಿದ ನಂತರ ಆ ಸೀಟುಗಳನ್ನು ಬೇರೆ ವಿದ್ಯಾರ್ಥಿಗಳಿಗೆ ಕೊಡಿಸಲು ಮಧ್ಯವರ್ತಿಗಳಂತೆ ಕೆಲಸ ಮಾಡುತ್ತಿದ್ದರು. ಪ್ರತಿ ಸೀಟಿಗೂ ₹60 ಲಕ್ಷದವರೆಗೂ ಹಣ ಪಡೆದು ಸೀಟುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *