ಅಂಗನವಾಡಿಗೆ ಬೀಗ ಜಡಿದ ಪ್ರಕರಣ – ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯ
ರಿಪ್ಪನ್‌ಪೇಟೆ – ಇಲ್ಲಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಾರಗೋಡು ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಅಂಗನವಾಡಿಗೆ ಬೀಗ ಹಾಕಿದ್ದ ಪ್ರಕರಣ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯಗೊಂಡಿದೆ.
ಕಾರಗೋಡು ಗ್ರಾಮದಲ್ಲಿರುವ ಅಂಗನವಾಡಿಗೆ ಅದೇ ಗ್ರಾಮದ ನಿವಾಸಿ ನೇತ್ರಾವತಿ ಎಂಬುವವರು ಈ ಜಾಗ ನಮ್ಮ ಖಾತೆಯಲ್ಲಿ ಇದೆ ಎಂದು ಖ್ಯಾತೆ ತೆಗೆದು ಕಳೆದ ಮೂರು ದಿನಗಳಿಂದ ಬೀಗ ಜಡಿದಿದ್ದರು ಈ ಹಿನ್ನಲೆಯಲ್ಲಿ ಪೊಸ್ಟ್ ಮ್ಯಾನ್ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು.
ವಿಷಯ ತಿಳಿಯುತಿದ್ದಂತೆ ಸ್ಥಳಕ್ಕಾಗಮಿಸಿದ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ , ಹೆದ್ದಾರಿಪುರ ಗ್ರಾಪಂ ಪಿಡಿಓ ಹಾಗೂ ಅಧಿಕಾರಿಗಳು ನೇತ್ರಾವತಿ ರವರ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ ಆದರೆ ನಮ್ಮ ಖಾತೆ ಜಾಗದಲ್ಲಿ ಅಂಗನವಾಡಿ ಕಟ್ಟಡವಿದ್ದರೂ ನಾವು ಅದಕ್ಕೆ ಅಡ್ಡಿಪಡಿಸಿರಲಿಲ್ಲ ಆದರೆ ಗ್ರಾಮ ಪಂಚಾಯತಿಯ ಪಿಡಿಓ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರು ಹೇಳಿ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ನಂತರ ಸ್ಥಳಕ್ಕಾಗಮಿಸಿದ ರಿಪ್ಪನ್‌ಪೇಟೆ ರಾಜಸ್ವ ನಿರೀಕ್ಷಕ ಅಫ಼್ರೋಜ್ ಅಹಮದ್ ಹಾಗೂ ಹೆಡ್ ಕಾನ್ಸ್ ಟೇಬಲ್ ಗಿರೀಶ್ ಖಾಸಗಿ ವ್ಯಕ್ತಿಗಳ ಮನವೊಲಿಸಿ ಮುಂದಿನ ದಿನಗಳಲ್ಲಿ ಜಾಗದ ಸಂಪೂರ್ಣ ಸರ್ವೆ ಮಾಡಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಅಂಗನವಾಡಿಗೆ ಹಾಕಿದ್ದ ಬೇಲಿ ತೆರವುಗೊಳಿಸಿ ಬೀಗ ತೆಗೆದಿದ್ದಾರೆ.