Headlines

ಗ್ರಾಪಂ ಅಧ್ಯಕ್ಷೆಯ ಅವಾಚ್ಯ ಪದಬಳಕೆಯ ಆಡೀಯೋ ವೈರಲ್ ಪ್ರಕರಣ ಉನ್ನತ ಮಟ್ಟದ ತನಿಖೆಯಾಗಲಿ – ಹರತಾಳು ಹಾಲಪ್ಪ

ಗ್ರಾಪಂ ಅಧ್ಯಕ್ಷೆಯ ಅವಾಚ್ಯ ಪದಬಳಕೆಯ ಆಡೀಯೋ ವೈರಲ್ ಪ್ರಕರಣ ಉನ್ನತ ಮಟ್ಟದ ತನಿಖೆಯಾಗಲಿ – ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ : ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಸದಸ್ಯರೊಬ್ಬರು ನಡೆಸಿದ್ದಾರೆನ್ನಲಾದ ವೀಡಿಯೋ ಹಾಗೂ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಹಾಗೂ ಪೊಲೀಸ್ ಇಲಾಖೆಯವರು ಸುಮೋಟ್ ಅಡಿ (ಸ್ವಯಂ ಪ್ರೇರಿತ) ದೂರು ದಾಖಲಿಸಿಕೊಂಡು ಬ್ಲಾಕ್‌ಮೇಲ್ ಮಾಡುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ  ಆಗ್ರಹಿಸಿದರು.

ಪಟ್ಟಣದ ಗ್ರಾಪಂ ಅಧ್ಯಕ್ಷೆ ಹಾಗೂ ಸದಸ್ಯರೊಬ್ಬರು ಪಂಚಾಯತ್ ಪಿಡಿಓ ವರ್ಗಾವಣೆಗೆ 2 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿರುವ ವೀಡಿಯೋ ವದಂತಿ ಮತ್ತು ಗ್ರಾಪಂ ಅಧ್ಯಕ್ಷೆ ಖಾಸಗಿ ವ್ಯಕ್ತಿಗಳಿಗೆ ಅಶ್ಲೀಲ ಪದ ಬಳಸಿ ಅವಮಾನಿಸಿರುವ ಘಟನೆಯನ್ನು ಖಂಡಿಸಿ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಗ್ರಾಮದ ಪ್ರಥಮ ಪ್ರಜೆಯಂತಹ ಜವಾಬ್ದಾರಿ ಸ್ಥಾನದಲ್ಲಿದ್ದು ಜನರಿಗೆ ಏಕವಚನದಲ್ಲಿ ಆಶ್ಲೀಲ ಪದಬಳಕೆ ಮಾಡಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಳೆದ 15 ದಿನಗಳಿಂದ ಹರಿದಾಡುತ್ತಿದ್ದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ ಈ ತಕ್ಷಣವೇ ಗ್ರಾಮಾಧ್ಯಕ್ಷೆ ಸಾರ್ವಜನಿಕರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು ಹಾಗೂ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದರು.

ಭ್ರಷ್ಟಾಚಾರ ಹಾಗೂ ಅಶ್ಲೀಲ ಪದಬಳಕೆಯ ಆರೋಪ ಹೊತ್ತಿರುವ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಕೂಡಲೇ ರಾಜೀನಾಮೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ರೂಪುರೇಷವನ್ನು ಸಿದ್ದಗೊಳಿಸಿ ಉಗ್ರ ಹೋರಾಟ ನಡೆಸುವುದರೊಂದಿಗೆ ಡಿಸೆಂಬರ್ 9 ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯವನ್ನು ಬಿಜೆಪಿ ಪಕ್ಷದ ಶಾಸಕರು ಸದನದಲ್ಲಿ ಚರ್ಚೆಗೆ ತರುವ ಮೂಲಕ ಕಾಂಗ್ರೆಸ್ ದುರಾಡಳಿತವನ್ನು ಜಗಜ್ಜಾಹೀರು ಮಾಡುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲಾ ಬಿಜೆಪಿ ಆಧ್ಯಕ್ಷ ಟಿ.ಡಿ ಮೇಘರಾಜ್ ಮಾತನಾಡಿ ರಿಪ್ಪನ್‌ಪೇಟೆ ಪಟ್ಟಣವು ಜಿಲ್ಲೆಯಲ್ಲಿಯೇ ಎಲ್ಲಾ ರಂಗಗಳಲ್ಲಿ ಅತ್ಯುತ್ತಮ ಹೆಸರುಗಳಿಸಿರುವ ಪಟ್ಟಣವಾಗಿದ್ದು ಇಂತಹ ಸುಸಂಸ್ಕೃತ ನೆಲದಲ್ಲಿ ಗ್ರಾಮದ ಪ್ರಥಮ ಪ್ರಜೆಯು ಅಶ್ಲೀಲವಾಗಿ ಗ್ರಾಪಂ ಸದಸ್ಯನೋರ್ವ ಹಾಗೂ ಖಾಸಗಿ ವ್ಯಕ್ತಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದು ಪಟ್ಟಣದ ಗೌರವಕ್ಕೆ ಚ್ಯುತಿ ತಂದಿದ್ದು ,ತಕ್ಷಣವೇ ಗ್ರಾಮಾಧ್ಯಕ್ಷೆ ಮತ್ತು ಸದಸ್ಯರೊಬ್ಬರು ನಡೆಸಿರುವ ಸಂಭಾಷಣೆಯ ಆಡಿಯೋದ ಜಾಡು ಹಿಡಿದು ಪೊಲೀಸ್ ಇಲಾಖೆ ತನಿಖೆ ನಡೆಸಿ ಸ್ವಯಂ ಪ್ರೇರಿತ ದೂರು ದಾಖಲಿಸಿ ಆರೋಪಿತರನ್ನು ಬಂಧಿಸುವಂತೆ ಪ್ರತಿಭಟನಾ ಸಭೆಯಲ್ಲಿ ಆಗ್ರಹಿಸಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್,ಪ್ರಧಾನ ಕಾರ್ಯದರ್ಶಿ ಸುಂದರೇಶ್ , ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ,ಎಂ ಬಿ ಮಂಜುನಾಥ್,ಸುರೇಶ್ ಸಿಂಗ್, ಆನಂದ್ ಮೆಣಸೆ, ಜಿ.ಡಿ.ಮಲ್ಲಿಕಾರ್ಜುನ, ನಾಗರತ್ನ ದೇವರಾಜ್, ಪದ್ಮ ಸುರೇಶ್, ಲೀಲಾ ಉಮಶಂಕರ್, ಮಂಜುಳಾ ಕೇತಾಜಿರಾವ್, ದೀಪಾ, ವನಮಾಲ, ದಾನಮ್ಮ, ಆಶಾ ತರಕಾರಿ ಯೋಗೇಂದ್ರಗೌಡ,ಗಣೇಶ್ ಕುಕ್ಕಲಲೆ ಹಾಗೂ ಇನ್ನಿತರರು ಪಕ್ಷದ ಮುಖಂಡರು ಹಾಜರಿದ್ದರು.

ಪ್ರತಿಭಟನಾ ಸಭೆಯ ನಂತರ ವಿನಾಯಕ ವೃತ್ತದಿಂದ ಮೆರವಣಿಗೆ ಹೊರಟು ಗ್ರಾಮ ಪಂಚಾಯ್ತಿ ಮುಂಭಾಗದಲ್ಲಿ ಉಪತಹಶೀಲ್ದಾರ್ ಗೌತಮ್ , ತಾಲ್ಲೂಕು ಪಂಚಾಯ್ತಿ ಇಓ ನರೇಂದ್ರ ಹಾಗೂ ಸಿಪಿಐ ಗುರಣ್ಣ ಹೆಬ್ಬಾರ್ ಮನವಿ ಪತ್ರವನ್ನು ನೀಡಿ ಸರ್ಕಾರಕ್ಕೆ ತಲುಪಿಸಲು ಮನವಿ ಮಾಡಿದರು.

Leave a Reply

Your email address will not be published. Required fields are marked *