2 ಸಾವಿರ ಕಿಮೀ ದೂರದ ಜಾರ್ಖಂಡ್ ನಿಂದ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕರೆತಂದ ರಿಪ್ಪನ್‌ಪೇಟೆ ಪೊಲೀಸರು : ಯಾಕೆ ಗೊತ್ತಾ ಈ ಸುದ್ದಿ ನೋಡಿ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಪಂ ವ್ಯಾಪ್ತಿಯ ಹೊಂಡಲಗದ್ದೆ ಗ್ರಾಮದಲ್ಲಿ ಜಾರ್ಖಂಡ್ ಮೂಲದ ಕಾರ್ಮಿಕನೊಬ್ಬ ನಿಗೂಡವಾಗಿ ಸಾವನ್ನಪ್ಪಿರುವ ಘಟನೆಯ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ರಿಪ್ಪನ್‌ಪೇಟೆ ಪೊಲೀಸರು 2 ಸಾವಿರ ಕಿಮೀ ದೂರದ ಜಾರ್ಖಂಡ್ ಗೆ ಕರೆದೊಯ್ದಿದ್ದ ಮೃತದೇಹವನ್ನು ವಾಪಾಸು ಕರೆಸಿರುವ ಘಟನೆ ನಡೆದಿದೆ.
ಜಾರ್ಖಂಡ್ ಮೂಲದ ಉದಯ್ (26) ಎಂಬ ಕಾರ್ಮಿಕ ಹೊಂಡಲಗದ್ದೆಯ ಕ್ವಾರೆಯೊಂದರಲ್ಲಿ ಕೆಲಸ ಮಾಡುತಿದ್ದು ಶುಕ್ರವಾರ ರಾತ್ರಿ ನಿಗೂಡವಾಗಿ ಸಾವನ್ನಪ್ಪಿದ್ದ ಬಗ್ಗೆ ವರದಿಯಾಗಿತ್ತು.
ಶುಕ್ರವಾರ ರಾತ್ರಿ ವಿಪರೀತ ಸಿಡಿಲು ಸಹಿತ ಮಳೆಯಾಗಿದ್ದು ಉದಯ್ ಸಿಡಿಲು ಬಡಿದು ಸಾವನ್ನಪ್ಪಿರಬಹುದು ಅಥವಾ ಗಣಿ ಬ್ಲಾಸ್ಟ್ ನಿಂದ ಸತ್ತಿರಬಹುದು ಎಂಬ ಊಹಾಪೋಹಗಳು ಸ್ಥಳೀಯರಲ್ಲಿ ಹುಟ್ಟಿಕೊಂಡಿತ್ತು.ಈ ಉಹಾಪೋಹಗಳಿಗೆ ಪೂರಕವೆಂಬಂತೆ ಕಲ್ಲು ಕ್ವಾರೆಯ ಮಾಲೀಕರು ಹಾಗೂ ಸಂಬಂಧಿಸಿದವರು ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಮುಟ್ಟಿಸದೇ ಆತುರ ಆತುರದಲ್ಲಿ ಕೋಣಂದೂರು ಆಸ್ಪತ್ರೆಗೆ ಮೃತದೇಹವನ್ನು ಕರೆದೊಯ್ದು ಸ್ವಾಭಾವಿಕ ಸಾವು ಎಂಬ ರಿಪೋರ್ಟ್ ರೆಡಿ ಮಾಡಿಸಿ ರಾತ್ರೋರಾತ್ರಿ ಮೃತದೇಹವನ್ನು ಜಾರ್ಖಂಡ್ ಗೆ ಕಳುಹಿಸಿಕೊಟ್ಟಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.
ಈ ಹಿನ್ನಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಕಲ್ಲು ಕ್ವಾರೆಗೆ ಸಂಬಂಧಿಸಿದವರನ್ನು ವಿಚಾರಣೆಗೆ ಒಳಪಡಿಸಿ ಘಟನೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ತನಿಖೆ ನಡೆಸುವ ಹಿನ್ನಲೆಯಲ್ಲಿ ಜಾರ್ಖಂಡ್ ಗೆ ಕರೆದೊಯ್ದಿದ್ದ ಉದಯ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿದೆ.
ಜಾರ್ಖಂಡ್ ನಿಂದ ತುತ್ತು ಅನ್ನಕ್ಕಾಗಿ ವಲಸೆ ಬಂದಿದ್ದ ಬಡ ಕಾರ್ಮಿಕ ಉದಯ್ ಸಿಡಿಲು ಬಡಿದು ಸತ್ತರೋ..!? ಗಣಿ ಬ್ಲಾಸ್ಟ್ ನಿಂದ ಸತ್ತರೋ ಅಥವಾ ಹೃದಯಾಘಾತದಿಂದ ಸತ್ತರೋ ಎಂಬ ಸತ್ಯಾಸತ್ಯತೆ ಮರಣೋತ್ತರ ಪರೀಕ್ಷೆಯ ನಂತರ ತಿಳಿದುಬರಬೇಕಾಗಿದೆ.