ರಿಪ್ಪನ್ ಪೇಟೆ : ಶ್ರದ್ದಾ ಭಕ್ತಿಯಿಂದ ನೆರವೇರಿದ ಲಕ್ಷ್ಮಿಪೂಜೆ
ರಿಪ್ಪನ್ ಪೇಟೆ: ದೀಪಾವಳಿ ಹಬ್ಬದ ಸಂಭ್ರಮ ಪಟ್ಟಣದೆಲ್ಲೆಡೆ ಕಂಡು ಬಂದಿದೆ. ವಿಶೇಷವಾಗಿ ಗುರುವಾರ ಲಕ್ಷ್ಮಿ ಪೂಜೆ ನೆರವೇರಿಸಲಾಯಿತು. ಅಂಗಡಿಗಳು, ಶೋರೂಮ್ ಗಳು, ಕಚೇರಿಗಳು, ಸೇರಿದಂತೆ ಹಲವರು ಲಕ್ಷ್ಮಿ ಪೂಜೆ ಮಾಡಿದ್ದಾರೆ.
ದೀಪಾವಳಿಯ ಅಮವಾಸ್ಯೆಯ ದಿನವಾದ ಗುರುವಾರ ಲಕ್ಷ್ಮೀ ಪೂಜೆಯನ್ನು ಶ್ರದ್ದಾಭಕ್ತಿಯಿಂದ ಇಲ್ಲಿನ ಅಂಗಡಿ, ಹೋಟೆಲ್ ಇನ್ನಿತರ ಉದ್ಯಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಮುತ್ತೈದೆಯರು ಸೇರಿದಂತೆ ಬಂಧು-ಬಳಗದವರು ಪೂಜೆಯೊಂದಿಗೆ ಸಂಭ್ರಮಿಸಿದರು.
ಇಂದು ಕೂಡ ಪಟ್ಟಣದಲ್ಲಿ ಜನಜಂಗುಳಿ ಕಂಡು ಬಂದಿತು. ದಿನಸಿ, ಬಟ್ಟೆ ಅಂಗಡಿಗಳು, ಪಟಾಕಿ ಸ್ಟಾಲ್ ಗಳ ಎದುರು ಹೆಚ್ಚಿನ ಜನಸಂದಣಿ ಕಂಡು ಬಂದಿದೆ. ಹೊಸಬಟ್ಟೆ, ಪೂಜಾ ಸಾಮಗ್ರಿ, ಪಟಾಕಿ ಖರೀದಿ ಭರಾಟೆ ಜೋರಾಗಿತ್ತು.
ಎಲ್ಲಾ ರಸ್ತೆಗಳಲ್ಲಿ ಬಾಳೆಕಂದು, ಉತ್ರಾಣಿ, ಮಾವಿನಸೊಪ್ಪು, ಬಗೆಬಗೆಯ ಹೂವುಗಳು, ಕುಂಬಳಕಾಯಿ ಮೊದಲಾದವುಗಳನ್ನು ಜನರು ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು. ಈ ಬಾರಿ ಪಟ್ಟಣಕ್ಕೆ ಚೆಂಡು ಹೂವು ರಾಶಿ ರಾಶಿಯಾಗಿ ಮಾರಾಟಕ್ಕೆ ಬಂದಿದೆ. ದೀಪಾವಳಿ ಎಂದರೆ ಚೆಂಡು ಹೂವುಗಳ ರಾಜ ಎಂದೆ ಅರ್ಥ. ಅದರ ಜೊತೆಗೆ ಆಕಾಶಬುಟ್ಟಿ, ಹಣತೆ, ಕೆರಕನ ವಸ್ತುಗಳ ಮಾರಾಟವೂ ಜೋರಾಗಿತ್ತು.
ವಿನಾಯಕ ವೃತ್ತ ಸೇರಿದಂತೆ ಹಲವು ಪ್ರಮುಖ ರಸ್ತೆಗಳ ವರ್ತಕರು ತಮ್ಮ ಅಂಗಡಿ ಮಳಿಗೆಗಳ ಎದುರು ರಂಗೋಲಿ ಹಾಕಿ ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು ಕಂಡು ಬಂದಿತು. ಅನೇಕರು ತಮ್ಮ ಮನೆ,ಅಂಗಡಿಗಳಲ್ಲಿ ವಿಶೇಷ ವಿದ್ಯುತ್ ದೀಪಲಂಕಾರ ಮಾಡಿದ್ದಾರೆ. ಆಕಾಶಬುಟ್ಟಿ ಕಟ್ಟಿ ಬೆಳಕಿನ ಹಬ್ಬ ಆಚರಿಸಲು ಮುಂದಾಗಿದ್ದ ದೃಶ್ಯ ಕಂಡು ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಇಂದು ಹಬ್ಬದ ಸಿದ್ಧತೆ ಜೋರಾಗಿತ್ತು. ಕೆಮ್ಮಣ್ಣು, ಉರುಮಂಜು ತಂದು ಮನೆಯ ಗೋಡೆಗಳಿಗೆ ಬಳಿಯುವುದು, ಬೇಸಾಯದ ಸಲಕರಣೆಗಳ ತೊಳೆದು ಒಟ್ಟಾಗಿ ಜೋಡಿಸಿಟ್ಟು ಪೂಜಿಸುವುದು ರೂಢಿಯಲ್ಲಿದೆ. ಕುಂಟೆ, ನೊಗ, ಎತ್ತಿನ ಗಾಡಿ, ನೇಗಿಲು ಮುಂತಾದ ಎಲ್ಲಾ ವ್ಯವಸಾಯ ಉಪಕರಣಗಳನ್ನು ರೈತರು ಬಹಳ ಶ್ರದ್ಧೆ, ಭಕ್ತಿಯಿಂದ ಪೂಜಿಸುವ ದೃಶ್ಯ ಕಂಡು ಬಂದಿದೆ. ಮಕ್ಕಳು ಹೊಸ ಬಟ್ಟೆ ಧರಿಸಿ ಕುಣಿದು ಕುಪ್ಪಳಿಸಿದರೆ ಪಟಾಕಿ ಸದ್ದು ಕೂಡ ಅಲ್ಲಲ್ಲಿ ಕೇಳಿ ಬರುತ್ತಿತ್ತು. ಈ ಬಾರಿ ಪಟಾಕಿ ಹಾವಳಿ ಹೆಚ್ಚಾಗಿ ಇಲ್ಲದಿದ್ದರೂ ಕೂಡ ಕಡಿಮೆಯೇನೂ ಇರಲಿಲ್ಲ. ಹೆಚ್ಚು ಅಪಾಯಕಾರಿಯಲ್ಲದ ಹಸಿರು ಪಟಾಕಿಗಳನ್ನು ಜನರು ಖರೀದಿಸಿದ್ದರು.