ಚಿರತೆ ಉಗುರು, ಹಲ್ಲು ಅಕ್ರಮ ಸಾಗಾಟ – ಮಾಲು ಸಮೇತ ವ್ಯಕ್ತಿ ವಶಕ್ಕೆ

ಕಾನೂನು ಬಾಹಿರವಾಗಿ ಚಿರತೆ ಉಗುರು ಮತ್ತು ಹಲ್ಲುಗಳ ಸಾಗಾಟದಲ್ಲಿ ತೊಡಗಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ಪೊಲೀಸ್ ದಳ ಸೊತ್ತು ಸಮೇತ ವಶಕ್ಕೆ ತೆಗೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿ ನಡೆದಿದೆ.
ದಾಸಕೊಪ್ಪ ಸರ್ಕಲ್ ಪೆಟ್ರೋಲ್ ಬಂಕ್ ಹತ್ತಿರ ಕಾನೂನುಬಾಹಿರವಾಗಿ ಚಿರತೆ ಉಗುರು ಮತ್ತು ಹಲ್ಲುಗಳ ಸಾಗಾಟದಲ್ಲಿ ತೊಡಗಿದ್ದ ಶಂಕೆಯಿಂದ ವಿಚಾರಣೆಗೊಳಪಡಿಸಿದಾಗ ಶಿಕಾರಿಪುರ ತಾಲೂಕಿನ ಹಾರೊಗೊಪ್ಪ ನಿವಾಸಿ ಲೋಕೇಶ್ ಭಾಗ್ಯಣ್ಣ ಅವರ ಬಳಿ 16 ಉಗುರು, 3 ಹಲ್ಲು ಪತ್ತೆಯಾಗಿದೆ. ತಕ್ಷಣ ಮಾಲು ಸಮೇತ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಸಾಗರ ಅರಣ್ಯ ಸಂಚಾರಿ ಪೊಲೀಸ್ ದಳದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿನಾಯಕ ಕೆ.ಮತ್ತು ಸಿಬ್ಬಂದಿಯಾದ ಗಣೇಶ್, ವಿಶ್ವನಾಥ, ಆಂಜನೇಯ ಮತ್ತು ದಿನೇಶ, ಪ್ರಮೋದಕುಮಾರಿ, ಮಡಿಕೇರಿಯ ಸಿಐಡಿ ಅರಣ್ಯ ಘಟಕದ ಎಸ್‌ಪಿ ಎಸ್.ಎಸ್. ಕಾಶಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.