Digital arrest | ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 41 ಲಕ್ಷ ದೋಚಿದ್ದ ಉತ್ತರಪ್ರದೇಶದ ಇಬ್ಬರನ್ನು ಬಂಧಿಸಿದ ಶಿವಮೊಗ್ಗ ಪೊಲೀಸರು


ವಿಡಿಯೋ ಕಾಲ್ ಮಾಡಿ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 41 ಲಕ್ಷ ದೋಚಿದ್ದ ಉತ್ತರಪ್ರದೇಶದ ಇಬ್ಬರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಸೆ. 27 ರಂದು ಶಿವಮೊಗ್ಗದ ಎಲ್.ಎಸ್ ಆನಂದ್(72) ಅವರಿಗೆ, ಅಪರಿಚಿತ ವ್ಯಕ್ತಿಯು ಸಿಬಿಐ ಅಧಿಕಾರಿ ಎಂದು ಹೇಳಿ ವಿಡಿಯೋ ಕಾಲ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹಣವು ಅಕ್ರಮವಾಗಿ ವರ್ಗಾವಣೆಯಾಗಿದ್ದರಿಂದ ನಿಮ್ಮ ಮೇಲೆ ದೂರು ದಾಖಲಾಗಿದೆ.
ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಜಾರಿ ಆಗಿ ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದು, ನೀವು ಇದರಿಂದ ಹೊರ ಬರಬೇಕಾದರೇ ನಾವು ಹೇಳಿದ ಖಾತೆಗೆ ಹಣ ವರ್ಗಾವಣೆ ಮಾಡಬೇಕೆಂದು ತಿಳಿಸಿದ್ದಾನೆ.
ಬೆದರಿಸಿ ಪಿರ್ಯಾದಿಯವರಿಂದ ಒಟ್ಟು 41 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದು, ಈ ಬಗ್ಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ., ಎಎಸ್ಪಿಗಳಾದ ಅನಿಲ್ ಕುಮಾರ್ ಭೂಮ್ ರಡ್ಡಿ, ಕಾರಿಯಪ್ಪ ಎ.ಜಿ. ಮಾರ್ಗದರ್ಶನದಲ್ಲಿ, ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ಡಿವೈಎಸ್ಪಿ ಕೃಷ್ಣಮೂರ್ತಿ ಕೆ. ಮೇಲ್ವಿಚಾರಣೆಯಲ್ಲಿ, ಪಿಐ ಮಂಜುನಾಥ ನೇತೃತ್ವದ ಎಎಸ್‌ಐ ಶೇಖರ್ ಮತ್ತು ಸಿಬ್ಬಂದಿಗಳಾದ ಆರ್. ವಿಜಯ್, , ರವಿ ಬಿ., ಶರತ್ ಕುಮಾರ್ ಬಿ.ಎಸ್. ಅವರುಗಳನ್ನು ಒಳಗೊಂಡ ತನಿಖಾ ತಂಡನ್ನು ರಚಿಸಲಾಗಿತ್ತು.
ತನಿಖಾ ತಂಡವು ನವೆಂಬರ್ 12 ಪ್ರರಕಣದ ಆರೋಪಿಗಳಾದ ಉತ್ತರ ಪ್ರದೇಶ ಮೊಹಮ್ಮದ್ ಅಹಮದ್(45) ಅಭಿಶೇಕ್ ಕುಮಾರ್ ಶೇಟ್(27) ಅವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಒಟ್ಟು 23,89,751 ರೂ ಹಣವನ್ನು ವಶಕ್ಕೆ ಪಡೆದಿದ್ದಾರೆ. ಸದರಿ ತನಿಖಾ ತಂಡದ ಕಾರ್ಯವನ್ನು ಎಸ್ಪಿ ಅಭಿನಂದಿಸಿದ್ದಾರೆ.
