HOSANAGARA | ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ – ಬಸ್ ಚಾಲಕ ಹಾಗೂ ಮೂವರು ಶಿಕ್ಷಕಿಯರಿಗೆ ಗಂಭೀರ ಗಾಯ – 29 ಮಂದಿ ಆಸ್ಪತ್ರೆಗೆ ದಾಖಲು
ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಹೊರಟಿದ್ದ ಬಸ್ಸು ಅಪಘಾತವಾಗಿ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಮುಂಡಳ್ಳಿ ಸಮೀಪ ನರ್ತಿಗೆ ಬಳಿ ಇಂದು ನಡೆದಿದೆ.
ಚಾಮರಾಜನಗರ ಯಳಂದೂರಿನ ಎಸ್ ಡಿ ಎಂ ಶಾಲೆಯ ವಿದ್ಯಾರ್ಥಿಗಳಿದ್ದ ಪ್ರವಾಸಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯಾದ ರಭಸಕ್ಕೆ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದೆ.
ಚಾಮರಾಜನಗರ ಜಿಲ್ಲೆಯ ಮಸಣಪುರದ ಬಸ್ ಚಾಲಕ ಸುರೇಶ್ (50) ರವರ ತಲೆಗೆ ಗಂಭೀರ ಗಾಯಗಳಾಗಿದ್ದು , ಚಾಮರಾಜನಗರದ ದೇಶವಳ್ಳಿ ಗ್ರಾಮದ ಶಿಕ್ಷಕಿ ನಂದಿನಿ (35) ,ಚಾಮರಾಜನಗರ ಜಿಲ್ಲೆಯ ಮಳಂದೂರು ಟೌನ್ ನ ನೀಲಾಂಬರಿ(28) ಹಾಗೂ ಶಶಿಕಲಾ(35) ರವರಿಗೆ ಗಂಭೀರ ಗಾಯಗಳಾಗಿದೆ.ಬಸ್ಸಿನಲ್ಲಿ 29 ಪ್ರಯಾಣಿಕರಿದ್ದು ಉಳಿದವರಿಗೆ ಸನ್ಣಪುಟ್ಟ ಗಾಯಗಳಾಗಿದೆ.
ಗಾಯಗೊಂಡವರನ್ನು ಕೂಡಲೇ ಎರಡು ಅಂಬುಲೆನ್ಸ್ ನಲ್ಲಿ ನಗರ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೊಸನಗರ ತಾಲೂಕು ಆಸ್ಪತ್ರೆಗೆ ಹಾಗೂ ಹೆಚ್ಚು ಗಾಯಗೊಂಡವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ದೌಡಾಯಿಸಿದ ಸ್ಥಳೀಯರು ಪೊಲೀಸರೊಂದಿಗೆ ಕೈಜೋಡಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಇದೇ ವೇಳೆ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.