ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಪರಿಸರ ಉಳಿಸಿ – ಪಿಎಸ್‌ಐ ಪ್ರವೀಣ್ ಎಸ್ ಪಿ
ರಿಪ್ಪನ್‌ಪೇಟೆ : ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಸಮತೋಲನ ಕಳೆದುಕೊಂಡು ಅಪಾಯದ ಮಟ್ಟ ತಲುಪಿದೆ. ಶುದ್ಧ ಪರಿಸರದಿಂದ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಪ್ಲಾಸ್ಟಿಕ್ ಬಳಕೆ ತ್ಯಜಿಸುವಂತೆ ಪಿಎಸ್‌ಐ ಪ್ರವೀಣ್ ಎಸ್ ಪಿ ಹೇಳಿದರು.
ಕೊಪ್ಪ ಸೈಕ್ಲಿಂಗ್ ಕ್ಲಬ್ ನವರು ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಅಭಿಯಾನದಡಿಯಲ್ಲಿ ಹಮ್ಮಿಕೊಂಡಿರುವ ಕೊಪ್ಪ – ಸೈಕಲ್ ಜಾಥಾ ರಿಪ್ಪನ್‌ಪೇಟೆ ಪಟ್ಟಣಕ್ಕೆ ಆಗಮಿಸುತಿದ್ದಂತೆ ಅವರನ್ನು ಸ್ವಾಗತಿಸಿ ಮಾತನಾಡಿದ ಅವರು ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ಕಾಗದ ಆಥವಾ ಬಟ್ಟೆ ಉತ್ಪನ್ನ ಬಳಸುವುದರೊಂದಿಗೆ ಪರಿಸರ ಸಮತೋಲನಕ್ಕೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಹಾಗೂ ಇಂತಹ ಜಾಥಾಗಳು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ವಿಷಕಾರಿ ಆಗಿರುವ ಪ್ಲಾಸ್ಟಿಕ್ ಮಣ್ಣಿನಲ್ಲಿ ಸೇರಿದರೆ ನೂರಾರು ವರ್ಷ ಕರಗದೆ ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತದೆ. ಭೂಮಿಯಲ್ಲಿ ಸೇರುವುದರಿಂದ ನೀರು ಇಳಿದಂತೆ ಮಾಡುತ್ತದೆ. ಮೂಕ ಪ್ರಾಣಿಗಳು ತಿಂದರೆ ಸಾಯುತ್ತವೆ. ಪ್ಲಾಸ್ಟಿಕ್ ಸುಡುವುದರಿಂದ ಓಝೋನ್ ಪದರಕ್ಕೆ ಹಾನಿ ಆಗುವುದರ ಜೊತೆಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಬಳಸಿದ ಪ್ಲಾಸ್ಟಿಕ್ ಹೊರಗೆ ಎಸೆಯದೆ ಮನೆಯಲ್ಲಿಯೇ ಸಂಗ್ರಹಿಸಬೇಕು ಬಳಸಿದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ವಸ್ತುಗಳನ್ನು ಪುನರ್ ಬಳಕೆ ಕೇಂದ್ರಕ್ಕೆ ಕಳುಹಿಸಬೇಕು. ಪ್ಲಾಸ್ಟಿಕ್ ಬದಲಾಗಿ ಬಟ್ಟೆ ಚೀಲಗಳನ್ನು ಮತ್ತು ಕಾಗದ ಚೀಲಗಳನ್ನು ಬಳಸಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕಾಗಿದೆ ಎಂದರು.
ಈ ಸಂಧರ್ಭದಲ್ಲಿ ಕೊಪ್ಪ ಸೈಕ್ಲಿಂಗ್ ಕ್ಲಬ್ ನ ನರೇಂದ್ರ ಕಾಮತ್ ,ಸಂತೋಷ್ ಕುಮಾರ್ , ರಾಜೇಷ್ ಭಟ್ , ನವೀನ್ ,ಗುರುಸ್ವಾಮಿ ರಕ್ಷಣಾ ಇಲಾಖೆಯ ಉಮೇಶ್ , ಸಂತೋಷ್ ಹಾಗೂ ಮಧುಸೂಧನ್ ಇದ್ದರು.