RIPPONPETE | ಕೆರೆಹಳ್ಳಿಯಲ್ಲಿ ಗ್ರಾಮ ದೇವರುಗಳಿಗೆ ಕುರಿ,ಕೋಳಿ ಬಲಿ ನೀಡಿ ಸಂಭ್ರಮದ ನೋನಿ ಆಚರಣೆ
ಮಲೆನಾಡಿನ ಪ್ರದೇಶದಲ್ಲಿ ದೀಪಾವಳಿಯಲ್ಲಿ ಗ್ರಾಮ ದೇವರುಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಕುರಿಕೋಳಿ ಬಲಿ ನೀಡಿ ಸಂಭ್ರಮದೊಂದಿಗೆ ನೋನಿ ಆಚರಿಸುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ.
ರಿಪ್ಪನ್‌ಪೇಟೆ ಪಟ್ಟಣದ ಮೇಲಿನ ಕೆರೆಹಳ್ಳಿ ಹಾಗೂ ಕೆಳಗಿನ ಕೆರೆಹಳ್ಳಿ ಗ್ರಾಮಸ್ತ್ಗರು ತಮ್ಮ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಕುರಿಕೋಳಿ ಬಲಿ ನೀಡಿ ಸಂಭ್ರಮದೊಂದಿಗೆ ನೋನಿ ಹಬ್ಬವನ್ನು ಆಚರಿಸಿದರು.
ರೈತರು ತಮ್ಮ ಕುಟುಂಬದ ನೇಮ ನಿಷ್ಠೆಯಂತೆ ವರ್ಷವೂ ಆಚರಿಸುವ ನೋನಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ. ಕುಟುಂಬದವರು ನಂಬಿರುವ ದೇವರಿಗೆ ವಿವಿಧ ಬಗೆಯ ಹರಕೆ ಸಲ್ಲಿಸುತ್ತಾರೆ. ಗ್ರಾಮ ದೇವತೆಗಳು, ದೈಯ, ಭೂತ, ರಣ, ಚೌಡಿ, ಯಕ್ಷಿ ದೇವರಿಗೆ ಹರಕೆ ಒಪ್ಪಿಸುತ್ತಾರೆ. ಅನ್ಯ ಆಹಾರ ಬಯಸುವ ದೇವರುಗಳಿಗೆ ಕೋಳಿ, ಕುರಿ, ಕಡಿದು ಪೂಜೆ ನೆರೆವೇರಿಸುತ್ತಾರೆ. ಕೆಲವು ದೇವರುಗಳಿಗೆ ಹಣ್ಣು–ಕಾಯಿ ಒಡೆದು ಪೂಜೆ ಮಾಡುತ್ತಾರೆ. ಈ ದೇವರುಗಳ ಹರಕೆ ಒಪ್ಪಿಸುವ ಕಾರ್ಯ ದೀಪಾವಳಿ ಮೊದಲ ದಿನದಿಂದ ಆರಂಭವಾಗಿ ಕೊನೆಯ ದಿನದವರೆಗೂ ನಡೆಯುತ್ತದೆ.

ಭೂಮಿ ಹುಣ್ಣಿಮೆ ಆಗುತ್ತಿದ್ದಂತೆ ಕೆಲ ಊರುಗಳಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು, ಗರ್ಭಿಣಿಯರು ಊರು ಬಿಡುವುದು ಪದ್ದತಿ ಕಾರಣ ಗ್ರಾಮ ದೇವರಿಗೆ ಸಾರು ಹಾಕುವ ಮೊದಲು ಅವರನ್ನು ಗ್ರಾಮದಲ್ಲಿನ ಜಮೀನಿನ ಗುಡಿಸಿಲಿನಲ್ಲಿ ಅಥವಾ ಸಂಬಂಧಿಕರ ಮನೆಗಳಿಗೆ ಕಳುಹಿಸುತ್ತಾರೆ ಇನ್ನೂ ಕೆಲವರು ಊರಿನಲ್ಲಿಯೇ ಉಳಿದರೂ ಅವರು ಋತುಮತಿಯಾದರೆ ಅಥವಾ ಸಾವನ್ನಪ್ಪಿದರೆ ಇಲ್ಲವೆ ಹೆರಿಗೆಯಾದರೆ ಆ ಊರಿನಲ್ಲಿ ನೋನಿ ಆಚರಣೆ ಇರುವುದಿಲ್ಲ. ಇನ್ನೂ ಬರುವ ವರ್ಷದ ವರೆಗೂ ಕಾಯಬೇಕಾಗುತ್ತದೆ ಇಂತಹ ಪದ್ದತಿ ಪರಂಪರಾಗತವಾಗಿ ಆಚರಣೆಯಲ್ಲಿರುವುದು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿ ಉಳಿಯುವರೊಂದಿಗೆ ಕಠಿಣ ಆಚರಣೆಯಿಂದಾಗಿ ಗ್ರಾಮದಲ್ಲಿ ಜಾತಿ ಬೇಧ-ಭಾವನೆ ಇಲ್ಲದೆ ಸಹೋದರತ್ವ ಸ್ನೇಹ ಸೌಹಾರ್ದತೆಯಿಂದಿರಲು ನೋನಿ ಕಾರಣವಾಗಿದೆ.

ಎಷ್ಟೇ ದ್ವೇಷ, ಅಸೂಯೆ ಇದ್ದರೂ ನೋನಿ ಆಚರಣೆಯಲ್ಲಿ ಊರು ಜನ ಸಂಘಟಿತರಾಗಿ ಒಂದು ಕಡೆ ಜಮಾಯಿಸಿ ನಿರ್ಧಾರ ಕೈಗೊಂಡು ಗ್ರಾಮ ದೇವರುಗಳಿಗೆ ಪೂಜೆ ಸಲ್ಲಿಸಿ ತಮ್ಮ ಜಮೀನಿನಲ್ಲಿನ ಫಸಲು ಹಾಗೂ ಜನ ಜಾನುವಾರುಗಳಿಗೆ ರೋಗ ರುಜಿನೆ ಬಾರದಂತೆ ರಕ್ಷಣೆ ನೀಡಿ ಗ್ರಾಮದಲ್ಲಿ ಕಳ್ಳತನ ಇನ್ನಿತರ ಅವಘಡಗಳು ಸಂಭವಿಸದಂತೆ ಊರ ಗಡಿರಕ್ಷಣೆ ಮಾಡು ತಾಯಿ ಎಂದು ಪ್ರಾರ್ಥಿಸಿ ಹರಕೆ ಒಪ್ಪಿಸುವುದು ವಾಡಿಕೆ.
ರಿಪ್ಪನ್‌ಪೇಟೆ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯಾ ಗ್ರಾಮದವರು ಒಂದೊಂದು ದಿನ ತಮ ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಕುರಿ ಕೋಳಿ ಬಲಿ ನೀಡುತ್ತಾರೆ.

ಈ ವಾರದಲ್ಲಿ ಪಟ್ಟಣದ ವ್ಯಾಪ್ತಿಯ ಬರುವೆ ಗಾಮದಬನ, ಚಿಕ್ಕಬೀರನಕೆರೆ ಬೂತಪ್ಪ, ಮಲ್ಲಾಪುರದ ಮರುಬಿನಕುಣಿ ಬೂತಪ್ಪ, ಯಕ್ಷಣಿ ಹೀಗೆ ಗವಟೂರು ಬರುವೆ, ಕಣಬಂದೂರು, ಬೆಳಕೋಡು, ಕುಕ್ಕಳಲೇ, ವಡಗೆರೆ, ಬಟ್ಟೆಮಲ್ಲಪ್ಪ, ಹರತಾಳು, ದೊಡ್ಡಿನಕೊಪ್ಪದ ಶೀಲವಂತ ಮಕ್ಕಳ ಚೌಡಿ, ಬೈರಾಪುರ, ಮುಡುಬ, ಬೆನವಳ್ಳಿ, ಲಕ್ಕವಳ್ಳಿ, ಮಾದಾಪುರ, ಆಲವಳ್ಳಿ, ಚೌಡೇಶ್ವರಿ ಬೀದಿಯಲ್ಲಿನ ಯಕ್ಷಿಣಿ, ತಮ್ಮಡಿಕೊಪ್ಪ, ಬಸವಾಪುರ, ಹೆದ್ದಾರಿಪುರ, ಕೊಳವಳ್ಳಿ,ಕೋಟೆತಾರಿಗ, ಬೆಳ್ಳೂರು, ಮೂಲೆಗದ್ದೆ, ವಿಜಾಪುರ, ಕಚ್ಚಿಗೆಬೈಲು, ಕೇಶವಪುರ, ಬಾಳೂರು, ಹಾಲುಗುಡ್ಡೆ ಮಾದ್ಲಾರದಿಂಬ, ನೇರಲುಮನೆ, ಬೆಳಂದೂರು, ಕೆದಲುಗುಡ್ಡೆ ಇನ್ನಿತರ ಗ್ರಾಮಗಳಲ್ಲಿ ಊರು ಹೊರಭಾಗದಲ್ಲಿ ಮತ್ತು ಜಮೀನಿನ ಮೇಲ್ಭಾಗದಲ್ಲಿ ನೆಲಸಿರುವ ಗ್ರಾಮ ದೇವರುಗಳಿಗೆ ನೋನಿಯ ಸಂದರ್ಭದಲ್ಲಿ ಹರಕೆ ಕುರಿ, ಕೋಳಿ, ಹಣ್ಣು-ಕಾಯಿ ಸಮರ್ಪಿಸುವುದು ಪದ್ದತಿ ಇದೆ.