ಭಾರಿ ಮಳೆಗೆ ಸೂಡೂರು ಬಳಿಯಲ್ಲಿ ಕೊಚ್ಚಿಹೋದ ರೈಲ್ವೆ ಟ್ರ್ಯಾಕ್ ನ ಜಲ್ಲಿ – ರೈಲು ಸಂಚಾರ ವ್ಯತ್ಯಯ
ರಿಪ್ಪನ್‌ಪೇಟೆ : ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಸೂಡೂರು ಬಳಿಯಲ್ಲಿ ರೈಲ್ವೆ ಹಳಿಯಡಿಯಲ್ಲಿ ಹಾಕಿದ್ದ ಜಲ್ಲಿಕಲ್ಲುಗಳು ಪೂರ್ತಿಯಾಗಿ ಕೊಚ್ಚಿಕೊಂಡು ಹೋಗಿ ರೈಲ್ವೆ ಸಂಚಾರಕ್ಕೆ ವ್ಯತ್ಯಯವುಂಟಾಗಿರುವ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲಾದ್ಯಂತ ಮಂಗಳವಾರ ಸುರಿದ ಭಾರಿ ಮಳೆಗೆ ರೈಲು ಹಳಿಗಳ ಅಡಿಯಿರುವ ಜಲ್ಲಿ ಸಂಪೂರ್ಣ ಕೊಚ್ಚಿ ಹೋಗಿ, ತಾಳಗುಪ್ಪ-ಬೆಂಗಳೂರು, ತಾಳಗುಪ್ಪ-ಮೈಸೂರು ಟ್ರೈನ್ ಸಂಚಾರಕ್ಕೆ ಅಡ್ಡಿಯಾಗಿರುವ ಘಟನೆ ನಡೆದಿದೆ.
ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕುಂಸಿ – ಆನಂದಪುರ ರೈಲ್ವೆ ಮಾರ್ಗದಲ್ಲಿ ಅಡಚಣೆಯಾಗಿದೆ. ಇಲ್ಲಿನ ಸೂಡೂರು ಬಳಿಯಲ್ಲಿ ರೈಲ್ವೆ ಟ್ರ್ಯಾಕ್‌ನಲ್ಲಿದ್ದ ಜಲ್ಲಿ ಪೂರ್ತಿ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಅದೃಷ್ಟಕ್ಕೆ ಟ್ರ್ಯಾಕ್ ಮ್ಯಾನ್‌ನಿಂದ ಸಂಭವನೀಯ ಅಪಾಯ ತಪ್ಪಿದೆ.
ಟ್ರ್ಯಾಕ್ ಮ್ಯಾನ್ ರೈಲ್ವೆ ಹಳಿಯನ್ನು ಗಮನಿಸುತ್ತಿದ್ದಾಗ ರೈಲ್ವೆ ಹಳಿಯು ಆಧಾರವಿಲ್ಲದೆ ನಿಂತಿರುವುದು ಕಾಣಿಸಿದೆ. ತಕ್ಷಣ ಅವರು ಮೇಲಾಧಿಕಾರಿಗಳ ಗಮನಕ್ಕೆ ವಿಷಯ ಮುಟ್ಟಿಸಿದ್ದಾರೆ. ಹೀಗಾಗಿ ತಾಳಗುಪ್ಪದಿಂದ ಬೆಂಗಳೂರು ಮತ್ತು ಮೈಸೂರಿಗೆ ಹೊರಟಿದ್ದ ರೈಲುಗಳು ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿದೆ.
ವಿಷಯ ತಿಳಿದು ಸ್ಥಳಕ್ಕೆ ರೈಲ್ವೆ ಇಂಜಿನಿಯರಿಂಗ್ ತಂಡ, ರೈಲ್ವೆ ಪೊಲೀಸರು ಭೇಟಿ ನೀಡಿ ರೈಲ್ವೆ ಟ್ರ್ಯಾಕ್ ರಿಪೇರಿಯ ಕೆಲಸವನ್ನ ನಿರ್ವಹಿಸುತ್ತಿದ್ದಾರೆ.