Ripponpete | ಆಹಾರ ಸುರಕ್ಷತಾ ಅಧಿಕಾರಿಗಳ ದಿಡೀರ್ ದಾಳಿ – ಹಲವು ಮಳಿಗೆಗಳಿಗೆ ನೋಟೀಸ್ ಜಾರಿ
ರಿಪ್ಪನ್‌ಪೇಟೆ : ಪಟ್ಟಣದ ಅಂಗಡಿ ಹಾಗೂ ಹೊಟೇಲ್ ಗಳಲ್ಲಿ ಹಲವಾರು ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿರುವ ಹಿನ್ನಲೆಯಲ್ಲಿ ಆಹಾರ ಸುರಕ್ಷ ತಾ ಹಾಗೂ ಗುಣಮಟ್ಟ ಇಲಾಖೆ(fssai) ಅಧಿಕಾರಿಗಳ ತಂಡ ಪಟ್ಟಣದ ಹಲವು ಅಂಗಡಿಗಳ , ಬೇಕರಿಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಘಟನೆ ನಡೆದಿದೆ.
ಪಟ್ಟಣದ ಹಲವಾರು ಅಂಗಡಿ , ಬೇಕರಿ ಮತ್ತು ಮಾಲ್ ಗಳಲ್ಲಿ ಅವಧಿ ಮೀರಿದ ತಂಪು ಪಾನೀಯ , ಬ್ರೆಡ್ , ತಿಂಡಿ ತಿನಿಸುಗಳನ್ನು ಹಾಗೂ ಸರಿಯಾದ ಸುರಕ್ಷತಾ ಮಾನದಂಡವಿಲ್ಲದ ದುಬೈ ಚಾಕಲೇಟ್ ನ್ನು ಮಾರಾಟ ಮಾಡುತ್ತಿರುವ ಆರೋಪದ ಹಿನ್ನಲೆಯಲ್ಲಿ ಇಂದು ಅಧಿಕಾರಿಗಳು ಪಟ್ಟಣದ ವಿವಿಧ ಮಾಲ್ , ಬೇಕರಿ ,ಹಾಗೂ ಅಂಗಡಿ ಹೋಟೇಲ್ ಗಳ ಮೇಲೆ ದಾಳಿ ನಡೆಸಿ ಶುಚಿತ್ವ, ಪರವಾನಗಿ, ಆಹಾರ ಭದ್ರತೆ ಕಾರಣಗಳಿಗಾಗಿ ಪರಿಶೀಲನೆ ನಡೆಸಿ ಹಲವು ಮಳಿಗೆಗಳಿಗೆ ನೊಟೀಸ್ ಜಾರಿ ಮಾಡಿದ್ದಾರೆ.
ಈ ಸಂಧರ್ಭದಲ್ಲಿ ಮಾದ್ಯಮದವರೊಂದಿಗೆ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆಯ ಅಧಿಕಾರಿ ಸದಾಶಿವ ರವರು ಮಾತನಾಡಿ ಹೋಟೆಲ್, ಬೇಕರಿ, ನೀರಿನ ವ್ಯಾಪಾರ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಆಹಾರಕ್ಕೆ ಸಂಬಂಧಿಸಿದ ಉದ್ಯಮ ನಡೆಸುವವರು (ಆಹಾರೋದ್ಯಮ) ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ಪರವಾನಗಿ ಪಡೆಯ ಬೇಕಾಗಿರುವುದು ಕಡ್ಡಾಯವಾಗಿದೆ.
ಆಹಾರೋದ್ಯಮಕ್ಕೆ ಎಫ್ಎಸ್ಎಸ್ಎಐ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಿ, ಪೂರಕ ದಾಖಲಾತಿ ಒದಗಿಸಿದ ನಂತರ ಸಂಬಂಧಿತ ಬ್ಯಾಂಕ್ನಲ್ಲಿ ಶುಲ್ಕ ಪಾವತಿಸಿದರೆ 10 ದಿನದೊಳಗೆ ಪರವಾನಗಿ ಲಭ್ಯವಾಗುತ್ತದೆ. ಅಥವಾ ಶಿವಮೊಗ್ಗದ ಹಾಲ್ಕೊಳ ದಲ್ಲಿರುವ ನಮ್ಮ ಕಛೇರಿಗೆ ನೇರವಾಗಿ ಬಂದು ಪರವಾನಗಿಯನ್ನು ಪಡೆಯಬಹುದಾಗಿದೆ ಎಂದರು.
ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಹಲವಾರು ಮಳಿಗೆಯವರು ಎಫ್ಎಸ್ಎಸ್ಎಐ(FSSAI) ಪರವಾನಗಿ ಪಡೆದಿಲ್ಲ ಅವರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದ್ದು ಆ ನಂತರದಲ್ಲಿ ಪರವಾನಿಗೆ ಪಡೆಯದೇ ಇರುವ ಮಳಿಗೆಯವ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಆಹಾರ ಸುರಕ್ಷ ತಾ ಹಾಗೂ ಗುಣಮಟ್ಟ ಇಲಾಖೆಯ(fssai) ನೀಲಕಂಠ ರವರು ಹಾಗೂ ರಕ್ಷಣಾ ಇಲಾಖೆಯು ಖಾದರ್ ರವರು ಇದ್ದರು.