ಪೊಲೀಸ್ ಅಧಿಕಾರಿಯ ದರ್ಪದ ವರ್ತನೆಯ ಆರೋಪ – ಕ್ರಮಕ್ಕೆ ಆಗ್ರಹ
ತೀರ್ಥಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಅಶ್ವಥ್ ಗೌಡ ಅವರು ಪತ್ರಕರ್ತರೊಂದಿಗೆ ದರ್ಪದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸದಸ್ಯರು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಗುರುವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ತೀರ್ಥಹಳ್ಳಿಯ ‘ಪ್ರಜಾವಾಣಿ’ಯ ಅರೆಕಾಲಿಕ ವರದಿಗಾರ ನಿರಂಜನ್ ರಥಬೀದಿಯಲ್ಲಿ ವರದಿಗಾಗಿ ತೆರಳಿದ ಸಂದರ್ಭ ವಿಡಿಯೊ ಚಿತ್ರೀಕರಿಸುವಾಗ ಅಶ್ವಥ್ ಗೌಡ ಸಿಬ್ಬಂದಿಗೆ ಸೂಚನೆ ನೀಡಿ ಬಲವಂತವಾಗಿ ಮೊಬೈಲ್ ಫೋನ್ ಕಿತ್ತುಕೊಂಡು ಠಾಣೆಗೆ ಹೋಗಿದ್ದಾರೆ. ಮೊಬೈಲ್ ಫೋನ್ ಪಡೆಯಲು ಠಾಣೆಗೆ ಹೋದಾಗ ನಿಂದಿಸಿದ್ದಾರೆ. ಇದನ್ನು ಪ್ರಶ್ನಿಸಿದ ಇತರ ಪತ್ರಕರ್ತರ ಜೊತೆಗೂ ದರ್ಪದಿಂದ ವರ್ತಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
‘ತೀರ್ಥಹಳ್ಳಿ ಠಾಣೆಯಲ್ಲಿ ಅಳವಡಿಸಲಾದ ಸಿ.ಸಿ. ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ವರದಿ ನೀಡುವಂತೆ ಡಿವೈಎಸ್ಪಿಗೆ ಸೂಚಿಸಿದ್ದೇನೆ. ನಂತರ ಸತ್ಯಾಸತ್ಯತೆ ಅಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮಿಥುನ್ಕುಮಾರ್ ಹೇಳಿದರು.
ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಿವಕುಮಾರ್, ಪತ್ರಕರ್ತರಾದ ಎನ್. ರವಿಕುಮಾರ್, ವಿ.ಟಿ.ಅರುಣ್, ನಾಗರಾಜ ನೇರಿಗೆ, ಜೇಸುದಾಸ್, ರವಿಕುಮಾರ್ ಟೆಲೆಕ್ಸ್, ಚಂದ್ರಶೇಖರ ಶೃಂಗೇರಿ, ವೈದ್ಯನಾಥ, ಹಾಲಸ್ವಾಮಿ, ಹೊನ್ನಾಳಿ ಚಂದ್ರಶೇಖರ್, ಅಶ್ವಿನಿ ನಾಯಕ್, ಶಿವಾನಂದ ಕರ್ಕಿ, ಹುಚ್ಚರಾಯಪ್ಪ ಈ ವೇಳೆ ಹಾಜರಿದ್ದರು.
About The Author
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್