ಕೆಸರು ಗದ್ದೆಯಂತಾದ ರಸ್ತೆ – ಸಾರ್ವಜನಿಕರ ಪರದಾಟ | ಈ ಕಾಲೋನಿಯ ನಿವಾಸಿಗಳ ಗೋಳು ಕೇಳುವವರ್ಯಾರು..!??
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಶರೀಫ್ ನಗರದ ಆಯನ ಹೊಂಡ ಹತ್ತಿರದ ರಸ್ತೆಯು ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.
ಪಟ್ಟಣದ ಷರೀಫ್ ನಗರದ ಆಯನಹೊಂಡ ಪಕ್ಕದ ಕಾಲೋನಿಗಳಿಗೆ ತೆರಳಲು ಕನಿಷ್ಠ ಕಚ್ಚಾ ರಸ್ತೆಯಿಲ್ಲ. ಹೀಗಾಗಿ ಈ ಕಾಲೊನಿ ಮಳೆಯಾದರೆ ಕೆಸರಿನಲ್ಲಿಯೇ ಓಡಾಡುಂತಾಗಿದೆ’ ಎಂದು ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.
ಈಗ ಭಾರಿ ಮಳೆ ಸುರಿಯುತ್ತಿದ್ದು, ಮನೆಯಿಂದ ಹೊರಗೆ ಹೋಗಲು ಆಗುತ್ತಿಲ್ಲ. ಮೊಳಕಾಲುದ್ದ ಕೆಸರು ಆಗಿದೆ. ಹುಲ್ಲುಮುಳ್ಳಿನ ಪೊದೆ ಬೆಳೆದಿದೆ. ಇದರಿಂದ ಹಾವು, ಚೇಳಿನ ಭೀತಿ ಎದುರಾಗಿದೆ. ಮಕ್ಕಳು, ಮಹಿಳೆಯರು ಹೊರ ಬರಲು ಹೆದರುತ್ತಿದ್ದಾರೆ’ ಎಂದು ಗ್ರಾಮಸ್ಥರು ಪೋಸ್ಟ್ ಮ್ಯಾನ್ ಸುದ್ದಿಯೊಂದಿಗೆ ತಮ್ಮ ಗೋಳು ತೋಡಿಕೊಂಡರು.
ನೂರಾರು ಜನ ವಾಸಿಸುವ ಈ ಕಾಲೋನಿಗಳು ಇಲ್ಲಿಯವರೆಗೂ ಶುದ್ಧ ಕುಡಿಯುವ ನೀರಿನ ಘಟಕ ಕಂಡಿಲ್ಲ. ಸಮರ್ಪಕ ರಸ್ತೆ, ಚರಂಡಿ ಇಲ್ಲದ ಕಾರಣ ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.
ಆಯನ ಹೊಂಡದ ಹತ್ತಿರ ಇರುವ ರಸ್ತೆಗೆ ಅತಿಯಾದ ಮಳೆಯಾಗಿದ್ದರಿಂದ ಹೆಸರಿನಲ್ಲಿ ನಡೆದಾಡುವ ಪರಿಸ್ಥಿತಿ ಬಂದಿದೆ. ಈ ಸ್ಥಳವನ್ನು ದುರಸ್ತಿ ಪಡಿಸುವುದಕ್ಕೆ ಯಾವುದೇ ಅಧಿಕಾರಿಗಳು ಮುಂದಾಗಿಲ್ಲ. ಈ ಕೆಸರಿನ ರಸ್ತೆಯಲ್ಲಿ ಹಲವಾರು ಜನರು ಬಿದ್ದು ಅಪಘಾತಗಳಾಗಿವೆ, ಕೈ ಕಾಲುಗಳ ಮುರಿದುಕೊಂಡಿದ್ದಾರೆ.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರವಾದ ಬಂಕಾಪುರ ಪಟ್ಟಣದಲ್ಲಿ ಅಧಿಕಾರಿಗಳ ನಿರ್ಲಕ್ಷ ,ದುರ್ವ್ಯವಸ್ಥೆಯಿಂದ ಸಾರ್ವಜನಿಕರ ಪರದಾಡುವಂತಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಪುರಸಭೆ ಕಛೇರಿಗೆ ಹಲವಾರು ಬಾರಿ ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುತ್ತಾರೋ ಕಾದುನೋಡಬೇಕಾಗಿದೆ..
ಈ ರಸ್ತೆಯಲ್ಲಿ ಸಂಚರಿಸುವಾಗ ಜೀವ ಎಡಗೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ. ಇಲ್ಲಿ ಯಾವುದೇ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ವೀಕ್ಷಣೆ ಮಾಡಿಲ್ಲ. ಸಾರ್ವಜನಿಕರನ್ನು ಸೇರಿಕೊಂಡು ಹಲವಾರು ಬಾರಿ ಪುರಸಭೆಗೆ ಮನವಿಯನ್ನು ಸಲ್ಲಿಸಿದ್ದೇವೆ . ಪುರಸಭೆಯಿಂದ ಯಾವುದೇ ರೀತಿಯ ಸ್ಪಂದನೆ ಬಂದಿಲ್ಲ. ನಮಗೆ ಯಾರು ಹೊಣೆ? ಎಂದು ಒಂದು ಪ್ರಶ್ನೆಯಾಗಿದೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ತವರು ಕ್ಷೇತ್ರದಲ್ಲಿ ಇಂತಹ ಪರಿಸ್ಥಿತಿ ಉಂಟಾಗಿರುವುದು ಖೇದಕರವಾಗಿದೆ.ಮುದಕಪ್ಪ ಕುರಿ
ಈ ರಸ್ತೆಯಲ್ಲಿ ಸಂಚರಿಸಲು ನಮಗೆ ಮುಜುಗರವಾಗುತ್ತಿದೆ. ಇಲ್ಲಿ ಸಂಚರಿಸುವ ಮಕ್ಕಳಿಗೆ ಕೈ ಕಾಲು ಮುರಿದಿವೆ. ಈ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರಿಗೆ ಸರಿಯಾದ ರಸ್ತೆ ಇಲ್ಲ ಕೆಸರಿನಿಂದ ಆವೃತವಾದ ರಸ್ತೆ. ಮೊಣಕಾಲು ಮಟ್ಟದಲ್ಲಿ ನಿಂತಿರುವ ನೀರಿನ ರಸ್ತೆ ಮೇಲೆ ಸಂಚರಿಸಬೇಕಾಗಿದೆ.ಶೇಖಪ್ಪ ಮಾಯಣ್ಣವರ್
ಈ ರಸ್ತೆಯಲ್ಲಿ ಸಂಚರಿಸುವಾಗ ಆಯ ತಪ್ಪಿದರೆ ಹೊಂಡಕ್ಕೆ ಆಹುತಿಯಾಗಬೇಕು. ಯಾವುದೇ ರೀತಿಯಿಂದ ಸಾರ್ವಜನಿಕರ ಅಳಲು ಕೇಳದ ಅಧಿಕಾರಿಗಳು. ಸಾರ್ವಜನಿಕರೆಲ್ಲರೂ ಸೇರಿಕೊಂಡು ಪುರಸಭೆಗೆ ಹಲವಾರು ಬಾರಿ ಮನವಿ ಕೊಟ್ಟಿದ್ದೇವೆ ಆದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ..ಗದಿಗೆಪ್ಪ ಕಳಸೂರ್
ವರದಿ : ನಿಂಗರಾಜ್ ಕೂಡಲ ಹಾವೇರಿ ಜಿಲ್ಲೆ, ಬಂಕಾಪುರ