ಹುಡುಗಿ ಹೆಸರಲ್ಲಿ ಫೇಸ್‌ಬುಕ್ ಸ್ನೇಹಿತನಿಗೆ ಬರೋಬ್ಬರಿ ₹6.87 ಲಕ್ಷ ರೂ.ವಂಚನೆ – ಯುವಕನ ಬಂಧನ

ಹುಡುಗಿ ಹೆಸರಲ್ಲಿ ಫೇಸ್‌ಬುಕ್ ಸ್ನೇಹಿತನಿಗೆ ಬರೋಬ್ಬರಿ ₹6.87 ಲಕ್ಷ ರೂ.ವಂಚಿಸಿದ ಭೂಪ!

ಹುಡುಗಿಯಂತೆ ನಟಿಸಿ ವ್ಯಕ್ತಿಯೊಬ್ಬರಿಗೆ 6.87 ಲಕ್ಷ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ ಶಿವಮೊಗ್ಗದ ಯುವಕನೊಬ್ಬನನ್ನು ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಸುಜೇಂದ್ರ (21) ಎಂಬಾತ ಸಿರಾ ಪಟ್ಟಣದ ವಿದ್ಯಾನಗರದ ನಿವಾಸಿ ಭರತ್‌ಕುಮಾರ್ ಎಂಬಾತನ ಜತೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ಶಿಪ್ ಮಾಡಿಕೊಂಡಿದ್ದ.ನಕಲಿ ಖಾತೆ ಮೂಲಕ ಹುಡುಗಿಯಂತೆ ವರ್ತಿಸುತ್ತಿದ್ದ.

ಭರತ್ ಕುಮಾರ್’ಗೆ ಫೇಸ್ ಬುಕ್’ನಲ್ಲಿ ಪರಿಚಯ ಮಾಡಿಕೊಂಡ ಆರೋಪಿಗಳು ಶರ್ಮಿಳ ಮತ್ತು ದಿವ್ಯ ಎಂಬ ಹೆಸರಿನಲ್ಲಿ ಮೆಸೆಂಜರ್ ಹಾಗೂ ವಾಟ್ಸಾಪ್ ಮೂಲಕ ಚಾಟ್ ಮಾಡಿದ್ದಾನೆ. ಬಳಿಕ ಕಷ್ಟ ಇದೆ ಎಂದು ನಂಬಿಸಿ ಹಣವನ್ನು ಫೋನ್ ಪೇ, ಪೇಟಿಎಂ, ಗೂಗಲ್ ಪೇ ಹಾಗೂ ಬ್ಯಾಂಕ್ ಖಾತೆಗಳಿಗೆ ಹಾಕಿಸಿಕೊಂಡು ವಂಚಿಸಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿಯಾಗಿದ್ದು, ಹಣ ಕಳೆದುಕೊಂಡ ಉದ್ಯಮಿ ಆತನ ತಂದೆ ಶಾಂತಕುಮಾರ್ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಡಿಸೆಂಬರ್ 12ರಂದು ಶಿವಮೊಗ್ಗ ನಗರ, ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ ಟೌನ್ ನಿವಾಸಿ ಸುಜೇಂದ್ರ ಎಂ.ಬಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರಿದಿದೆ.

ವಿಚಾರಣೆ ವೇಳೆ ಆರೋಪಿ ತಾನು ಆನ್‌ಲೈನ್ ಜೂಜಾಟದ ಚಟ ಹೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಂತ್ರಸ್ತನಿಂದ ಪಡೆದಿದ್ದ ಹಣವನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ.. ಸಿಇಎನ್ ಇನ್ಸ್‌ಪೆಕ್ಟರ್ ರಾಮಕೃಷ್ಣಯ್ಯ ನೇತೃತ್ವದ ತಂಡ ತನಿಖೆ ಕೈಗೊಂಡಿದೆ.

Leave a Reply

Your email address will not be published. Required fields are marked *