Headlines

ಅಚ್ಚರಿಯ ಮಡೆನೂರು ಜಲಾಶಯ – 60 ವರ್ಷ ನೀರಲ್ಲಿ ಮುಳುಗಿದ್ದರೂ ಅಚ್ಚಳಿಯದ ವಿನ್ಯಾಸ| ಇನ್ಮುಂದೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

ರಾಜ್ಯದಲ್ಲಿರುವ ಎಲ್ಲ ಜಲಾಶಯಗಳನ್ನು ನೋಡಬಹುದು. ಆದರೆ ಈ ಜಲಾಶಯವನ್ನು ನೋಡಲು ಸಾಧ್ಯವೇ ಇಲ್ಲ‌. ವರ್ಷಪೂರ್ತಿ ನೀರಿನಲ್ಲೇ ಮುಳುಗಿರುವ ಈ ಜಲಾಶಯ ಕಾಣಸಿಗುವುದೇ ಹತ್ತಾರು ವರ್ಷಗಳಿಗೊಮ್ಮೆ.

ಹೌದು! ಶರಾವತಿ ಒಡಲಲ್ಲಿ ಮುಳುಗಿಹೋಗಿರುವ ರಾಜ್ಯದ ಹಳೆಯ ಜಲಾಶಯದ ಕಥೆಯಿದು.ಲಿಂಗನಮಕ್ಕಿ ಜಲಾಶಯ ನಿರ್ಮಾಣಕ್ಕಿಂತ ಮೊದಲು ಅಂದರೆ 20 ವರ್ಷಗಳ ಹಿಂದೆ ಇನ್ನೊಂದು ಜಲಾಶಯ ನಿರ್ಮಿಸಲಾಗಿತ್ತು. ಶರಾವತಿ ನದಿಗೆ ಅಡ್ಡಲಾಗಿ ಮೊದಲು ಹಿರೇಭಾಸ್ಕರ ಎಂಬ ಡ್ಯಾಂನ್ನು ಎಂ ಸುಬ್ಬರಾವ್ ಅಧೀಕ್ಷಕ ಇಂಜಿನಿಯರ್ ನಿರ್ಮಾಣ ಮಾಡಿದ್ದರು.

ಇಡೀ ಆಣೆಕಟ್ಟೆಯ ನಿರ್ಮಾಣ ಸುರ್ಕಿ ಅಂದರೆ ಗಾರೆಯಿಂದ ನಿರ್ಮಾಣವಾಗುತ್ತದೆ. ಜಲಾಶಯದ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ನಿಯಂತ್ರಿತವಾಗಿ ಹೊರಬಿಡಲು ಆರು ಗೇಟುಗಳನ್ನು ಅಳವಡಿಸಲಾದರೆ,ಪ್ರವಾಹದ ನೀರನ್ನು ಹೊರಗೆ ಹಾಕಲು ವಿಶೇಷ ಮಾದರಿಯ ಹನ್ನೊಂದು ಸೈಫನ್ ಗಳನ್ನು ಅಳವಡಿಸಲಾಯಿತು.

ಈ ಸೈಫನ್ಗಳು ವೊಲ್ಯೂಟ್ ಮಾದರಿಯ ಸೈಫನ್ಗಳಾಗಿದ್ದು ಇವನ್ನು ತಜ್ಞ ಸಿವಿಲ್ ಇಂಜಿನಿಯರ್ ಗಣೇಶ ಐಯ್ಯರ್ ರವರು ನಿರ್ಮಿಸಿರುತ್ತಾರೆ.ಇವುಗಳು ಸುಮಾರು ಹದಿನೆಂಟು ಅಡಿ ವ್ಯಾಸವನ್ನು ಹೊಂದಿದ್ದು,ತಲಾ ಹನ್ನೊಂದು ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರನ್ನು ಹೊರಹಾಕುವ ಸಾಮರ್ಥ್ಯ ಹೊಂದಿವೆ. ಹಿರೇಭಾಸ್ಕರವನ್ನು ಕುರಿತು ಬರೆದ ಅನೇಕ ಲೇಖನಗಳಲ್ಲಿ,ಈ ಆಣೆಕಟ್ಟು ಸರ್ ಎಂ ವಿಶ್ವೇಶ್ವರಯ್ಯನವರ ನಿರ್ಮಾಣವರಂದು ತಪ್ಪಾಗಿ ಉಲ್ಲೇಖಿಸಿರುವುದು ಕಂಡುಬರುತ್ತದೆ.ಆದರೆ ಈ ಆಣೆಕಟ್ಟೆಗೂ ಸರ್ ಎಂ ವಿ ಯವರಿಗೂ ಯಾವುದೇ ಸಂಬಂಧವಿರುವುದಿಲ್ಲ.

ಈ ಜಲಾಶಯ ತನ್ನ ನಿರ್ಮಾಣ ಮುಕ್ತಾಯವಾದ ಹದಿನಾರೇ ವರ್ಷದಲ್ಲಿ ಮುಳುಗಿಹೋಗುವಂತಾದದ್ದು ನಾಡಿನ ದೌರ್ಭಾಗ್ಯ.ಈ ಜಲಾಶಯ ೧೯೪೭ರಲ್ಲಿ ಪೂರ್ಣಗೊಂಡು ಅದೇ ವರ್ಷ ಇದರಲ್ಲಿ ಜಲಸಂಗ್ರಹಣೆ ಆರಂಭವಾಗುತ್ತದೆ.ಇದರ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಮಹಾತ್ಮಾ ಗಾಂಧೀ ಜಲವಿದ್ಯುದಾಗರ ೧೯೪೮ರ ಫೆಬ್ರವರಿ ೨೧ರಂದು ಆರಂಭಗೊಳ್ಳುತ್ತದೆ. ಇದು ಒಟ್ಟು ೧೨೦ ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿತ್ತು.

 ಆದರೆ ಮುಂದೆ ೧೯೫೬ ರಲ್ಲಿ ಹಳೆಯ ಮೈಸೂರು ರಾಜ್ಯ ವಿಶಾಲ ಕರ್ನಾಟಕವಾಗಿ ವಿಸ್ತರಣೆಗೊಂಡಾಗ ರಾಜ್ಯದಲ್ಲಿ ವಿದ್ಯುತ್ ಕೊರತೆ ತೀವ್ರವಾಯಿತು.ಸರ್ಕಾರ ಹೆಚ್ ಇ ಸಿ ಪಿ ಯ ಮೂಲಕ ಶರಾವತಿಯ ಪೂರ್ಣ ಸಾಮರ್ಥ್ಯ ಬಳಸಲು ಉದ್ದೇಶಿಸಿದಾಗ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟುವುದು ಅನಿವಾರ್ಯವಾಯಿತು.೧೯೬೪ ರಲ್ಲಿ ಲಿಂಗನಮಕ್ಕಿ ಆಣೆಕಟ್ಟೆ ನಿರ್ಮಾಣವಾದಾಗ ಹಿರೇಭಾಸ್ಕರ ಅದರಲ್ಲಿ ಸಂಫೂರ್ಣ ಮುಳುಗಡೆಯಾದದ್ದಲ್ಲದೇ ಅದರ ಮೇಲೆ ಸುಮಾರು ನಲವತ್ತೊಂದು ಅಡಿ ನೀರು ನಿಲ್ಲತೊಡಗಿತು.ಲಿಂಗನಮಕ್ಕಿಯ ಪೂರ್ಣಮಟ್ಟ ಸಮುದ್ರಮಟ್ಟದಿಂದ ೧೮೧೯ ಅಡಿ ; ಆದರೆ ಹಿರೇಭಾಸ್ಕರ ೧೭೭೮ ಅಡಿ. ಹೀಗೆ ಹಿರೇಭಾಸ್ಕರ ೧೯೬೪ ರಿಂದ ಪ್ರತಿವರ್ಷ ಮುಳುಗಡೆಯಾಗುತ್ತದೆ.ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಇದು ನಮ್ಮ ಕಣ್ಣಿಗೆ ಬೀಳುತ್ತದೆ.

ಪ್ರತಿವರ್ಷ ಮೇ ತಿಂಗಳ ಅಂತ್ಯ ಇದನ್ನು ನೋಡಲು ಸೂಕ್ತಕಾಲ.ಈ ವರ್ಷ ಲಿಂಗನಮಕ್ಕಿ ಮಟ್ಟ ತುಂಬ ಇಳಿದಿದ್ದರಿಂದ ಇದನ್ನು ಕಾಣಲು ಸುಸಂದರ್ಭ.ಹಾಗಾಗಿ ಕಳೆದವಾರ ನಾವು ಕೆಲವರು ಈ ಜಲಾಶಯವನ್ನು ನೋಡಿಬಂದೆವು. ಅಂದಿನ ನಿರ್ಮಾತೃಗಳ ಕರ್ತೃತ್ವ ಶಕ್ತಿಗೆ ನಿದರ್ಶನವಾಗಿ ,ಆ ಆಣೆಕಟ್ಟು ನೀರಿನಲ್ಲಿ ಮುಳುಗಿ ಐವತ್ತಕ್ಕೂ ಹೆಚ್ಚು ವರ್ಷವಾದರೂ ಅತ್ಯಂತ ಸುಸ್ಥಿತಿಯಲ್ಲಿ ಇಂದಿಗೂ ಇದೆಯೆಂದರೆ ನಮಗೆ ಆಶ್ಚರ್ಯವಾಗುತ್ತದೆ.ಅದರ ಎರಡೂ ಬದಿಗೆ ಲಿಂಗನಮಕ್ಕಿ ಹಿನ್ನೀರು ತುಂಬಿದ್ದರೂ ಅದು ಅದ್ಭುತವಾಗಿ ಗೋಚರಿಸುತ್ತದೆ


ಈ ಡ್ಯಾಮ್ ನ ವಿಸ್ಯಾಸ ನೋಡಿದರೆ ಎಂಥವರಾದರೂ ವಿಸ್ಮಯಪಡಲೇಬೇಕು.ಜೊತೆಗೆ 50 ವರ್ಷಕ್ಕೂ ಹೆಚ್ಚು ಕಾಲ ಈ ಡ್ಯಾಂ ನೀರಿನಲ್ಲಿ ಮುಳುಗಿದ್ದರೂ ಇದುವರೆಗೆ ಇನ್ನೂ ಗಟ್ಟಿಮುಟ್ಟಾಗಿರುವುದು ಇನ್ನೊಂದು ವಿಶೇಷ.

ಆರಂಭದಲ್ಲಿ ಹಿರೇಬಾಸ್ಕರ ಜಲಾಶಯದ ನೀರನ್ನೇ ಬಳಸಿಕೊಂಡು ಶರಾವತಿ ಕಣಿವೆಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು.

ಆದರೆ ಬಳಿಕ‌ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಬೇಕು ಎಂಬ ಕಾರಣಕ್ಕೆ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಲಾಯಿತು.ಲಿಂಗನಮಕ್ಕಿ ಜಲಾಶಯ ನಿರ್ಮಾಣದ ಬಳಿಕ ಹಿರೇಬಾಸ್ಕರ ಡ್ಯಾ ಶರಾವತಿ ಹಿನ್ನೀರಿನಲ್ಲಿ ಮುಚ್ಚಿಹೋಯಿತು.


ಯಾವಾಗ ತೀವ್ರ ತರನಾದ ಬರಗಾಲ ಬಂದು ಲಿಂಗನಮಕ್ಕಿ ಡ್ಯಾಂ ಖಾಲಿಯಾಗುತ್ತಾ ಬರುತ್ತದೆಯೋ ಆಗ ಈ ಹಿರೇಭಾಸ್ಕರ ಡ್ಯಾಮ್ ಕಾಣಿಸುತ್ತದೆ.ಈ ಬಾರಿ ಶರಾವತಿ ಒಡಲು ಬರಿದಾಗಿರುವುದರಿಂದ ಹಿರೇಭಾಸ್ಕರ ಡ್ಯಾಮ್ ಕಾಣಿಸುತ್ತಿದೆ.

ಹಿರೇಭಾಸ್ಕರ ಡ್ಯಾಮ್ ಕಾಣಿಸಿದರೂ ಇದು ಪ್ರವಾಸಿಗರಿಂದ ದೂರವೇ ಉಳಿದಿದೆ. ಕಾರಣ ಇದು ನಿಷೇಧಿತ ಪ್ರದೇಶದಲ್ಲಿದೆ. ಹಿರೇಭಾಸ್ಕರ ಜಲಾಶಯಕ್ಕೆ ಹೋಗಬೇಕೆಂದರೆ ಶರಾವತಿ ಅಭಯಾರಣ್ಯದ ಒಳಗಿನಿಂದಲೇ ಹೋಗಬೇಕು.

ಜೊತೆಗೆ ಹಿನ್ನೀರು ಪ್ರದೇಶ ಕೆಪಿಸಿ (ಕರ್ನಾಟಕ ಪವರ್ ಕಾರ್ಪೊರೇಷನ್) ವ್ಯಾಪ್ತಿಗೆ ಬರುತ್ತದೆ.ಈ ಎರಡು ನಿರ್ಬಂಧಿತ ಪ್ರದೇಶಗಳಿರುವುದರಿಂದ ಹತ್ತಾರು ವರ್ಷಕ್ಕೆ ಒಮ್ಮೆ ಈ ಜಲಾಶಯ ಕಾಣಿಸಿದರೂ ಪ್ರವಾಸಿಗರಿಗೆ ಮಾತ್ರ ಇಲ್ಲಿಗೆ ಹೋಗಲು ಸಾಧ್ಯವಿಲ್ಲ.

ಅಪರೂಪಕ್ಕೊಮ್ಮೆ ಕಾಣಸಿಗುವ ಈ ಜಲಾಶಯ ನೋಡಲು ಭದ್ರತೆಯೊಂದಿಗೆ ಪ್ರವಾಸಿಗರಿಗೆ ಅವಕಾಶ ನೀಡಬೇಕು.ಜೊತೆಗೆ ವಿಶ್ವೇಶ್ವರಯ್ಯ ಅವರ ವಿಭಿನ್ನ ತಂತ್ರಜ್ಞಾನದ ಬಗ್ಗೆ ಸಿವಿಲ್ ಇಂಜಿನಿಯರ್‌ಗಳಿಗೆ ಅಧ್ಯಯನ ನಡೆಸಲು ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬರಲಾರಂಭಿಸಿವೆ.

ಈಗ ಅರಣ್ಯ ಇಲಾಖೆ ಮಡೆನೂರು ಡ್ಯಾಂ ಪ್ರದೇಶವನ್ನು ನಿರ್ಬಂದಿತ ಪ್ರದೇಶವಾಗಿ ಘೋಷಿಸಿದ್ದು ಅಕ್ರಮ ಪ್ರವೇಶ ನಿಷೇಧಿಸಿದೆ.

Leave a Reply

Your email address will not be published. Required fields are marked *