ಕೆರೆ ಬಳಕೆದಾರರ ಸಂಘಗಳಿಗೆ ತಪ್ಪು ಮಾಹಿತಿ, ಚೆಕ್‌ಗಳಿಗೆ ಪೋರ್ಜರಿ ಸಹಿ ಮಾಡಿ ₹ 2.54 ಲಕ್ಷ ಹಣ ದುರುಪಯೋಗಪಡಿಸಿಕೊಂಡ ಜಲ ಸಂವರ್ಧನೆ ಯೋಜನಾ ಸಂಘದ ಸಾಮಾಜಿಕ ತಜ್ಞನಿಗೆ ಶಿಕಾರಿಪುರದ ಎರಡನೇ ಅಧಿಕ ಸಿಜೆ ಮತ್ತು ಜೆಎಂಎಫ್ ನ್ಯಾಯಾಲಯ ಆರು ವರ್ಷ ಕಠಿಣ ಶಿಕ್ಷೆ ಹಾಗೂ ₹ 20,000 ದಂಡ ವಿಧಿಸಿ ಆದೇಶಿಸಿದೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿನೋದ್ ಎಲ್. ರಾಮದುರ್ಗ (29) ಶಿಕ್ಷೆಗೆ ಒಳಗಾದವರು. ವಿನೋದ್ 2011ರ ಮಾರ್ಚ್ 23ರಿಂದ 2013ರ ಮಾರ್ಚ್ 30ರವರೆಗೆ ರಾಜ್ಯ ಸರ್ಕಾರದ ಜಲಸಂವರ್ಧನ ಯೋಜನೆಯಲ್ಲಿ ಶಿಕಾರಿಪುರದಲ್ಲಿ ಕೆಲಸ ಮಾಡಿದ್ದರು.
ಈ ಅವಧಿಯಲ್ಲಿ ಮತ್ತು ಕರ್ತವ್ಯದಿಂದ ಬಿಡುಗಡೆ ಹೊಂದಿದ ನಂತರವೂ ಕೆರೆ ಬಳಕೆದಾರರ ಸಂಘಗಳಿಗೆ ತಪ್ಪು ಮಾಹಿತಿ ನೀಡಿ ಹಾಗೂ ಚೆಕ್‌ಗೆ ಪೋರ್ಜರಿ ಸಹಿ ಮಾಡಿ ಹಣ ದುರುಪಯೋಗ ಪಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಜಲ ಸಂವರ್ಧನೆ ಯೋಜನಾ ಸಂಘ ಶಿಕಾರಿಪುರ ಘಟಕದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಶಿರಾಳಕೊಪ್ಪ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಜಿ.ಗುರುಪ್ರಸಾದ್ ಪ್ರಕರಣದ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅವಿನಾಶ್ ಎಂ. ಘಾಳಿ ಈ ಆದೇಶ ನೀಡಿದ್ದಾರೆ.
