ತಾಂತ್ರಿಕ ದೋಷದಿಂದ ಕೆಎಸ್‌ಆರ್‌ಟಿಸಿ ಬಸ್ ಕೆಟ್ಟು ನಿಂತು, ಪ್ರಯಾಣಿಕರು ಸುಮಾರು ಮೂರು ಗಂಟೆ ಪರದಾಡುವಂತಾಯಿತು. ಸಾಗರ ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಪರ್ಯಾಯ ಬಸ್ ವ್ಯವಸ್ಥೆ ಮಾಡದ್ದಕ್ಕೆ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಹಿಡಿಶಾಪ ಹಾಕಿದರು.
ಶಿವಮೊಗ್ಗ – ಸಾಗರ – ಕಾರವಾರ ಮಾರ್ಗದ ಕೆಎಸ್‌ಅರ್‌ಟಿಸಿ ಬಸ್ಸಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸಾಗರ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸನ್ನು ರಿಪೇರಿಗೆ ಕೊಂಡೊಯ್ಯಲಾಯಿತು. ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಆ ಬಸ್ಸಿನಲ್ಲಿದ್ದರು.
ಬೆಳಗ್ಗೆ 10.30ರ ಹೊತ್ತಿಗೆ ಸಾಗರ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ತೆರಳಿದ ಬಸ್ ಹಿಂತಿರುಗಲೆ ಇಲ್ಲ. ಸತತ ಎರಡೂವರೆಗೆ ಗಂಟೆ ಕಾದರೂ ಪರ್ಯಾಯ ವ್ಯವಸ್ಥೆ ಆಗಲಿಲ್ಲ. ತಾವು ಬಂದಿದ್ದ ಬಸ್ ಕೂಡ ಮರಳಿ ಬರಲಿಲ್ಲ. ಇದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ನಿಲ್ದಾಣದ ಅಧಿಕಾರಿಗಳನ್ನು ವಿಚಾರಿಸಿ ಹೈರಾಣಾದರು.
ಕಾರವಾರಕ್ಕೆ ತೆರಳಬೇಕಿದ್ದ ಬಸ್ ಕೆಟ್ಟು ನಿಂತ ವಿಚಾರ ತಿಳಿಯುತ್ತಿದ್ದಂತೆ ಡಿಪೋ ಮ್ಯಾನೇಜರ್ ರಾಜಪ್ಪ ಅವರು ಮಧ್ಯ ಪ್ರವೇಶಿಸಿದರು. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿದರು.