w
Headlines
Home » ಶರಾವತಿ ಹಿನ್ನೀರ ಹಬ್ಬ ಎನ್ನುವ ಬದಲು ಕಣ್ಣೀರ ಹಬ್ಬ ಎಂದು ಹೆಸರಿಡಬಹುದಿತ್ತು – ಬಿ ಜಿ ನಾಗರಾಜ್|congress

ಶರಾವತಿ ಹಿನ್ನೀರ ಹಬ್ಬ ಎನ್ನುವ ಬದಲು ಕಣ್ಣೀರ ಹಬ್ಬ ಎಂದು ಹೆಸರಿಡಬಹುದಿತ್ತು – ಬಿ ಜಿ ನಾಗರಾಜ್|congress

ಶರಾವತಿ ಹಿನ್ನೀರ ಹಬ್ಬ ಎನ್ನುವ ಬದಲು ಕಣ್ಣೀರ ಹಬ್ಬ ಎಂದು ಹೆಸರಿಡಬಹುದಿತ್ತು – ಕಾಂಗ್ರೆಸ್

ಪಟಗುಪ್ಪೆಯಲ್ಲಿ ಶರಾವತಿ ಹಿನ್ನೀರು ಹಬ್ಬ ಆಚರಣೆಗೆ ಕಾಂಗ್ರೆಸ್ ಪಕ್ಷದ ವಿರೋಧ

ಹೊಸನಗರ : ಶಾಸಕ ಎಚ್. ಹಾಲಪ್ಪ ಹರತಾಳು ಅಧ್ಯಕ್ಷತೆಯಲ್ಲಿ ಮಾ.೪ರಂದು ತಾಲೂಕಿನ ಪಟಗುಪ್ಪೆಯಲ್ಲಿ ಏರ್ಪಡಿಸಿರುವ ಶರಾವತಿ ಹಿನ್ನೀರು ಹಬ್ಬ ಎನ್ನುವ ಕರ‍್ಯಕ್ರಮದ ಆಯೋಜನೆಯು ಆಯೋಜಕರ ವಿಕೃತ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ ಆರೋಪಿಸಿದ್ದಾರೆ.

ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಶರಾವತಿ ಮುಳುಗಡೆ ಎನ್ನುವುದು ಈ ಭಾಗದ ಜನರಿಗೆ ಕರಾಳ ದಿನವಾಗಿದೆ. ಹೊಸನಗರ ಹಾಗೂ ಸಾಗರ ತಾಲೂಕಿನ ಜನತೆಯ ಬದುಕಿಗೆ ಶಾಪವಾಗಿದೆ. ತಲೆತಲಾಂತರದಲ್ಲಿ ಈ ಭಾಗದಲ್ಲಿ ನೆಲೆಸಿದ್ದವರ ಮನೆ, ಜಮೀನು ಬದುಕನ್ನು ಕಿತ್ತುಕೊಂಡ ದುರಂತ ಘಟನೆ ಇದು. ಇಂತಹ ಮುಳುಗಡೆಯ ನೆಪವಾಗಿಸಿಕೊಂಡು, ಮುಳುಗಡೆಯಾಗಿ ೬೦ ವರ್ಷ ಕಳೆಯಿಂದು ಎಂದು ಫ್ಲೆಕ್ಸ್ ಹಾಕಿ ಶರಾವತಿ ಹಿನ್ನೀರ ಹಬ್ಬ ಎಂದು ಸಂಭ್ರಮಿಸುವ ಆಚರಣೆಯನ್ನು ಕೈಗೊಂಡಿರುವುದು ವಿಪರ್ಯಾಸವಷ್ಟೇ ಎಂದರು.

ಮುಳುಗಡೆ ಸಂದರ್ಭದಲ್ಲಿ ಅನುಭವಿಸಿದ ಸಂಕಷ್ಟವನ್ನು ಯುವ ಪೀಳಿಗೆಯವರಿಗೆ ಮನವರಿಕೆ ಮಾಡಿಕೊಡಬೇಕು. ಆದರೆ ಸಂಭ್ರಮಾಚರಣೆ ಮೂಲಕ ಇತಿಹಾಸವನ್ನು ಮರೆಸುವ ಯತ್ನ ಇದಾಗಿದೆ. ಅಂದು ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಂದ ಸಾವಿರಾರು ಕುಟುಂಬಗಳಿಗೆ ಇನ್ನೂ ನೆಲೆ ಕಂಡುಕೊಳ್ಳಲಾಗಿಲ್ಲ. ಸಂತ್ರಸ್ಥರಿಗೆ ಪರಿಹಾರ ಸಿಕ್ಕಿಲ್ಲ. ತಮ್ಮ ಅಜ್ಜ, ಅಜ್ಜಿ, ತಂದೆ ತಾಯಂದಿರು ಅನುಭವಿಸಿದ ನೋವಿನ ದಿನಗಳನ್ನು ನೆನೆಸಿಕೊಂಡಲ್ಲಿ ಇದು ಸಂತಸ ಪಡುವ ಹಬ್ಬವಾಗಲು ಸಾಧ್ಯವೇ ಇಲ್ಲ. ಶರಾವತಿ ಕಣ್ಣೀರ ಹಬ್ಬ ಎಂದರೆ ಹೆಚ್ಚು ಸೂಕ್ತವಾಗುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವೇಳೆ ಇಂತದ್ದೊಂದು ಕರ‍್ಯಕ್ರಮವನ್ನು ಆಯೋಜಿಸುವುದೇ ಆಗಿದ್ದಲ್ಲಿ, ನಾಡಿನ ಹಿರಿಯ ಸಾಹಿತಿ ನಾ. ಡಿಸೋಜ ಅವರಂತ ಹಲವು ಹಿರಿಯರು, ಮುಳುಗಡೆ ಸಂತ್ರಸ್ಥರ ಮಾರ್ಗದರ್ಶನ, ಸಲಹೆ ಪಡೆಯಬಹುದಿತ್ತು. ಸ್ವತಃ ಮುಳುಗಡೆ ಸಂತ್ರಸ್ಥರಾದ ಶಾಸಕ ಹಾಲಪ್ಪ ಅವರೂ ಸಹಾ ಇದರಲ್ಲಿ ಭಾಗಿಯಾಗುತ್ತಿರುವುದು ದುರದೃಷ್ಠಕರ ಎಂದ ಅವರು ತಮ್ಮ ಹಿಂದಿನ ತಲೆಮಾರಿನ ಜನರು ಅನುಭವಿಸಿದ ನೋವಿನ ನೆನಪಿನಲ್ಲಿ ಕೆಲ ಯುವಕರ ತಂಡ ಈಗ ಸಂಭ್ರಮಾಚರಣೆ ಮಾಡಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.