ಹುಂಚ : ಇಲ್ಲಿನ ಶ್ರೀ ರಂಗರಾವ್ ಸ್ಮಾರಕ ಸಭಾಭವನ , ಶ್ರೀ ಪದ್ಮಾoಬಾ ಪ್ರೌಢಶಾಲೆಯಲ್ಲಿ ದ್ವಿತೀಯ ವರ್ಷದ ನವೋದಯ ಮತ್ತು ಮುರಾರ್ಜಿ ಶಾಲೆಗಳ ಪ್ರವೇಶಕ್ಕೆ ಉಚಿತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು ಭಾನುವಾರ ಹುಂಚಾ ಅತಿಶಯ ಕ್ಷೇತ್ರದ ಪರಮ ಪೂಜ್ಯ ಗುರುಗಳಾದ – ಶ್ರೀ ಡಾ: ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಹುಂಚಾ ಗ್ರಾಮ ವ್ಯಾಪ್ತಿಯ ಮತ್ತು ಸುತ್ತಮುತ್ತಲಿನ 13 ಶಾಲೆಗಳಿಂದ 5ನೇ ತರಗತಿಯಲ್ಲಿ ಓದುತ್ತಿರುವ, ನವೋದಯ ಮತ್ತು ಮುರಾರ್ಜಿ ಪ್ರವೇಶ ಪರೀಕ್ಷೆ ಕಟ್ಟಲು ಆಸಕ್ತಿಯುಳ್ಳ 42 ಮಕ್ಕಳು ಮತ್ತು ಅವರ ಪೋಷಕರು ಭಾಗವಹಿಸಿದ್ದರು.
ಶಿಬಿರದಲ್ಲಿ ನೋಂದಣಿಯಾಗಿರುವ ಎಲ್ಲಾ ಮಕ್ಕಳಿಗೂ ಉಚಿತವಾಗಿ ಬ್ಯಾಗ್, ಪೆನ್, ನೋಟ್ ಪುಸ್ತಕ, ನೀರಿನ ಬಾಟಲ್, ಟೀಶರ್ಟ್ ನೀಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ನಿವೃತ್ತ ಶಿಕ್ಷಕರಾದ ಮಂಜಪ್ಪ, ಗುಳುಕೊಪ್ಪ ಮಾತನಾಡಿ “ಇಂದಿನ ಮಕ್ಕಳೇ.. ಮುಂದಿನ ದೇಶದ ಸಂಪತ್ತು.. ಹಾಗಾಗಿ ಸಾಮಾಜಿಕ ಕಳಕಳಿಯಿಂದ, ಯಾವುದೇ ಆರ್ಥಿಕ ಹೊಣೆಯನ್ನು ಪೋಷಕರಿಗೆ ಹೊರಿಸದೆ, ಈ ರೀತಿಯ ಉಚಿತ ಶಿಬಿರವನ್ನು ಆಯೋಜಿಸಿದ ಪ್ರಕಾಶ್ ಜೋಯ್ಸ್ ಮತ್ತು ಅವರ ತಂಡದ ಉತ್ಸಾಹವನ್ನು ಶ್ಲಾಘಿಸಿದರು.ಮಕ್ಕಳಿಗೆ ಅನೇಕ ಸಾಧಕರ ಉದಾಹರಣೆ ಕೊಟ್ಟು,ಮುಂದಿನ ದಿನಗಳಲ್ಲಿ ಪ್ರವೇಶ ಪರೀಕ್ಷೆಗೆ ಉತ್ತಮ ತಯಾರಿ ಮಾಡಬೇಕು” ಎಂದು ಹುರಿದುಂಬಿಸಿದರು.
ಈ ಶಿಬಿರದ ರೂವಾರಿಯಾದ ಹಳೆ ನವೋದಯ ವಿದ್ಯಾರ್ಥಿ ಪ್ರಕಾಶ್ ಜೋಯ್ಸ್, ಬೆಂಗಳೂರು ಮಾತನಾಡಿ ” ನವೋದಯ ಮತ್ತು ಮುರಾರ್ಜಿ ಶಾಲೆಗಳು, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳು.. ಮಕ್ಕಳ ಕನಸುಗಳನ್ನು ನನಸು ಮಾಡುವ ಮತ್ತು ಉತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾದ ಸಂಸ್ಥೆಗಳು.. ಇದರ ಸೌಲಭ್ಯ ನಮ್ಮೂರಿನ ಎಲ್ಲಾ ಮಕ್ಕಳು ಪಡೆಯಬೇಕು.
ನಮ್ಮ ಉದ್ದೇಶ, ಮಕ್ಕಳ ಕಲಿಕಾ ಜ್ಞಾನವನ್ನು ವೃದ್ಧಿಸುವುದು. ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಜ್ಞಾನ, ಸಲಹೆ, ಸೂಚನೆಗಳನ್ನು ಈ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಮತ್ತು ಪೋಷಕರಲ್ಲಿ ಮನವರಿಕೆ ಮಾಡಿಕೊಡುವುದು” ಎಂದು ತಿಳಿಸಿದರು.
ಶಿಬಿರದ ಮುಖ್ಯ ಶಿಕ್ಷಕರಾದ ಸಂತೋಷ್ , ರಾಷ್ಟ್ರೀಯ ವಿದ್ಯಾ ಸಂಸ್ಥೆ, ಕೋಣಂದೂರು ಮಾತನಾಡಿ “ನಮ್ಮ ಧ್ಯೇಯ.. ಉತ್ತಮ ಶಿಕ್ಷಣಕ್ಕೆ ಅಡಿಪಾಯ. ನಮ್ಮ ಊರಿನ ಮಕ್ಕಳು, ಉತ್ತಮ ಶಿಕ್ಷಣ ಪಡೆಯಬೇಕು, ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ಮಾದರಿ ನಾಗರಿಕ ಆಗುವಂತೆ ಬದುಕಬೇಕು” ಎಂದು ಹೇಳಿದರು.
ಹುಂಚಾ ಗ್ರಾಮದಲ್ಲಿ ಓದಿ, ಬೆಂಗಳೂರಿನಲ್ಲಿ ವಕೀಲರಾಗಿರುವ.. ಸಂತೋಷ್ ಗೇರ್ಗಲ್ ಮಾತನಾಡಿ “ಸ್ಪರ್ಧಾತ್ಮಕ ಯುಗದಲ್ಲಿ ಈ ರೀತಿಯಲ್ಲಿ ಪ್ರವೇಶ ಪೂರ್ವ ಪರೀಕ್ಷೆಗಳಿಗೆ ತಯಾರು ಮಾಡುವುದು ಬಹಳ ಮುಖ್ಯ ಮತ್ತು ಪ್ರಯೋಜನಕಾರಿ” ಎಂದು ತಿಳಿಸಿದರು.
ನವೋದಯ ಶಾಲೆಯ ಹಳೆಯ ವಿದ್ಯಾರ್ಥಿ ಹಿರಿಯೂರು ಶಾಲೆಯಲ್ಲಿ ಪ್ರಾಂಶುಪಾಲರಾಗಿರುವ ಎಂ.ಪಿ ನವೀನ್ ಕುಮಾರ್ ಮಾತನಾಡಿ “ಜೀವನದಲ್ಲಿ ಹಠ, ಛಲ, ಗುರಿ ಇದ್ದರೆ ಏನಾದರೂ ಸಾಧನೆ ಮಾಡಬಹುದು” ಎಂದು ತಿಳಿಸಿದರು.
ರಾಷ್ಟ್ರೀಯ ಪ್ರಶಸ್ತಿ ವಿಜೇತ, ಪ್ರಸಿದ್ಧ ಪಶು ವೈದ್ಯಾಧಿಕಾರಿ, ನವೋದಯ ಶಾಲೆಯ ಮತ್ತೊಬ್ಬ ಹಳೆಯ ವಿದ್ಯಾರ್ಥಿ ಸುನಿಲ್ ಕುಮಾರ್ ಕೆ.ಎಂ ಮಾತನಾಡಿ ” ನನ್ನ ಎಲ್ಲಾ ಸಾಧನೆಗೆ, ನವೋದಯ ಶಾಲೆಯಲ್ಲಿ ಸಿಕ್ಕಂತಹ ಶಿಕ್ಷಣವೆ ಕಾರಣ. ಹಾಗಾಗಿ ನೀವೆಲ್ಲರೂ ಕಷ್ಟ ಪಟ್ಟು ಓದಿ, ಇಂತಹ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು” ಎಂದು ಹೇಳಿದರು.
ಈ ಸಮಾರಂಭದಲ್ಲಿ ಶಿಬಿರದ ಶಿಕ್ಷಕರಾದ ಸಂತೋಷ್, ಪ್ರಶಾಂತ್, ದಿನೇಶ್, ಆದಿತ್ಯ, ಶಿವಕುಮಾರ್.. ಸಂಚಾಲಕರಾದ ಸಂಜಯ್, ವಿನಯ್, ಶ್ರೀಕಾಂತ್, ನಾಗೇಶ್ ನಾಯ್ಕ್,ಅಭಿಷೇಕ್ ವೃಷಭ, ಲಕ್ಷಣ ಹಾಗೂ ಹಳೆ ನವೋದಯ ವಿದ್ಯಾರ್ಥಿಗಳಾದ ಪುನೀತ್, ಶಶಿಧರ್, ಅಮರ್ ತುಂಬಳ್ಳಿ, ಗ್ರಾಮಪಂಚಾಯತಿಯ ದೇವೇಂದ್ರ, ಆಶಾ ಯದುಕುಮಾರ್, ಯಶೋಧ ಮತ್ತು ಶಿಭಿರಾರ್ಥಿಗಳ ಪೋಷಕರು, ಗ್ರಾಮಸ್ಥರು ಭಾಗವಹಿದ್ದರು.
ಈ ಶಿಬಿರದಲ್ಲಿ ಪ್ರತಿ ಶನಿವಾರ (ಮುರಾರ್ಜಿ) ಹಾಗೂ ಭಾನುವಾರ (ನವೋದಯ) ಪರೀಕ್ಷೆ ಕಟ್ಟಿದ ಮಕ್ಕಳಿಗೆ ಉಚಿತ ಕೋಚಿಂಗ್ ಕೊಡಲಾಗುತ್ತಿದೆ. ಪ್ರಥಮ ವರ್ಷದ ಶಿಭಿರದಲ್ಲಿ 27 ಮಕ್ಕಳು, 12 ವಿವಿಧ ಶಾಲೆಗಳಿಂದ ಭಾಗವಹಿಸಿದ್ದು,9 ಮಕ್ಕಳು ಮೊರಾರ್ಜಿ ಶಾಲೆಗೆ ತೇರ್ಗಡೆ ಆಗಿರುತ್ತಾರೆ.