‘ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆ ಶುರು ಮಾಡಿರುವುದು ಬಹಳ ಸಂತೋಷದ ವಿಚಾರ. ಯಾಕೆಂದರೆ, ದೇಶವನ್ನು ಮೂರು ತುಂಡು ಮಾಡಿದವರೇ ಅವರು’ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಗೇಲಿ ಮಾಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ವಾತಂತ್ರ್ಯಕೋಸ್ಕರ ಬಲಿದಾನ ಮಾಡಿದ ಸಾವಿರಾರು ಜೀವಗಳಿಗೆ ಬೆಲೆಯೇ ಇಲ್ಲ ಎನ್ನುವ ಹಾಗೆ ಅಖಂಡ ಭಾರತವನ್ನು ಮೂರು ತುಂಡು ಮಾಡುವ ಪಾಪದ ಕೆಲಸ ಮಾಡಿದ್ದು ಕಾಂಗ್ರೆಸ್’ ಎಂದು ಹೇಳಿದರು.
‘ಹೀಗೆ ದೇಶವನ್ನು ತುಂಡು ಮಾಡಿದ ಆ ಪಾಪದ ಪ್ರಾಯಶ್ಚಿತ್ತವಾಗಿ ಭಾರತ್ ಜೋಡೋ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿರುವುದು ನಿಜಕ್ಕೂ ಸಂತೋಷ ಎಂದ ಅವರು,ಈ ದೇಶಕ್ಕಾಗಿ ಬಲಿದಾನ ಮಾಡಿದವರಿಗೆ ಕಾಂಗ್ರೆಸ್ ಮೇಲೆ ಸಿಟ್ಟಿದೆ. ಕಾಂಗ್ರೆಸ್ ಪಕ್ಷ ನಾಶ ಆಗಬೇಕು ಎಂದು ಅವರು ಶಾಪ ಹಾಕಿದ್ದಾರೆ. ಅವರ ಶಾಪದಂತೆ ನಾಶವೂ ಆಗುತ್ತಿದೆ. ಆದರೂ ಅಲ್ಲೊಂದು ಚೂರು ಇಲ್ಲೊಂದು ಚೂರು ಎಂಬಂತೆ ಉಳಿದಿರುವ ಕಾಂಗ್ರೆಸ್ ಭಾರತವನ್ನು ಮತ್ತೆ ಜೋಡಿಸಲು ಹೊರಟಿದ್ದು ಒಳ್ಳೆಯದೇ’ ಎಂದರು.
‘ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಹೆಸರಿನಲ್ಲಿ ಅಖಂಡ ಭಾರತ ನಿರ್ಮಾಣಕ್ಕೆ ಹೊರಟಿದ್ದೇವೆ ಎಂದು ಅವರು ಹೇಳಬೇಕು. ಪಾಕಿಸ್ತಾನವನ್ನು ವಾಪಸ್ ತರುತ್ತೇವೆ, ಬಾಂಗ್ಲಾದೇಶವನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ರಾಹುಲ್ ತಿಳಿಸಬೇಕು. ಆಗ ಮಾತ್ರ ಇದು ನಿಜವಾದ ಭಾರತ್ ಜೋಡೋ ಯಾತ್ರೆಯಾಗುತ್ತದೆ’ ಎಂದರು.
‘ಪ್ರಿಯಾಂಕಾ ಗಾಂಧಿ, ರಾಬರ್ಟ್ ವಾದ್ರಾ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಾ? ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಿಯಾಂಕ ಗಾಂಧಿ, ರಾಬರ್ಟ್ ವಾದ್ರಾ ಅವರದ್ದೆಲ್ಲ ಫೋಟೊ ಹಾಕಿಕೊಂಡಿದ್ದಾರೆ. ಪಾಪ ಅವರೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ಎಂದು ಪ್ರಶ್ನಿಸಿದ ಈಶ್ವರಪ್ಪ, ರಾಬರ್ಟ್ ವಾದ್ರಾ ಅಂತೂ ದೇಶಕ್ಕಾಗಿ ಎಷ್ಟು ಬಲಿದಾನ ಮಾಡಿದ್ದಾನೆ ಎಂದು ದೇಶಕ್ಕೆ ಗೊತ್ತಾಗಿದೆ. ಆ ಕುಟುಂಬದ ಬಗ್ಗೆ ಮಾತನಾಡಿ ಸಾಕಾಗಿದೆ ‘ ಎಂದು ಹೇಳಿದರು.