ರಿಪ್ಪನ್ ಪೇಟೆ ; ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಬುಧವಾರ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಪ್ಪ ಹರತಾಳು ಅವರು ಅಧಿಕಾರಿಗಳ ಜತೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಬೆಳ್ಳೂರು ಪಂಚಾಯಿತಿ ವ್ಯಾಪ್ತಿಯ ತೊಗರೆ ಹಳ್ಳದ ಸಂಪರ್ಕ ರಸ್ತೆ, ಗಾಮನಗದ್ದೆ – ಚಿಲುಮೆ ಜಡ್ಡು ರಸ್ತೆ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಡೇರಿ ಮಚಲಿ ಜಡ್ಡು ಸಂಪರ್ಕ ರಸ್ತೆಯ ದುಸ್ಥಿತಿ ಕಣ್ಣಾರೆ ಕಂಡರು.
ಮಳೆ ನೀರು ನುಗ್ಗಿ ಹಾನಿಗೀಡಾದ ಬಸವಾಪುರದ ವೃದ್ಧೆ ಸುಶೀಲಮ್ಮ ಅವರ ಮನೆ ಹಾಗೂ ಗೋಡೆ ಕುಸಿತದಿಂದ ಗಾಯಗೊಂಡಿದ್ದ ಗಾಮನಗದ್ದೆ ಲೋಕೇಶ್ ಅವರ ಕುಟುಂಬದ ನಾಲ್ವರು ಸದಸ್ಯರ ಯೋಗಕ್ಷೇಮ ವಿಚಾರಿಸಿದರು.ಸರ್ಕಾರದಿಂದ ತುರ್ತು ಪರಿಹಾರ ಧನದ ಚೆಕ್ ಅನ್ನು ತಹಸೀಲ್ದಾರ್ ಎಸ್ . ವಿ. ರಾಜೀವ್ ಮುಖೇನ ವಿತರಿಸಿದರು.
ಸರ್ಕಾರದಿಂದ ಗಾಯಾಳು ಚಿಕಿತ್ಸೆ ವೆಚ್ಚ ಭರಿಸುವ ಕುರಿತು ಅಧಿವೇಶನದಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮ ವಹಿಸಿ ರೈತರಿಗೆ ಹಾಲಪ್ಪ ಕಿವಿಮಾತು ;
ಅತಿವೃಷ್ಟಿ ಹಾನಿ ಯಲ್ಲಿ ಕೇವಲ ಸರ್ಕಾರದ ಕಡೆ ಬೊಟ್ಟು ಮಾಡಿದರೆ ಪ್ರಯೋಜನವಿಲ್ಲ ಬದಲಿಗೆ ಸ್ಥಳೀಯರು ತಮ್ಮ ಜಮೀನು ಹೊಲಗದ್ದೆಗಳ ಬದುವಿನಲ್ಲಿ ಅಂಚಿನಲ್ಲಿರುವ ಹಳ್ಳಕೊಳ್ಳಗಳ ಚಾನೆಲ್ ಗಳ ಪಕ್ಕದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಮಳೆಗಾಲಕ್ಕೂ ಮುನ್ನ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಮ್ಮ ಪೂರ್ವಿಕರು ತೊಡಗಿಕೊಂಡಿರುತ್ತಿದ್ದರು.
ಬದಲಾದ ಕಾಲಘಟ್ಟದಲ್ಲಿ ಅವೆಲ್ಲವೂ ಬಗರ್ ಹುಕುಂ ಸಾಗುವಳಿದಾರರ ಕೈ ಸೇರಿದ ಪರಿಣಾಮ ಅನಾಹುತಗಳಿಗೆ ಎಡೆಮಾಡಿಕೊಟ್ಟಂತಾಗಿದೆ ಎಂದು ವಿಷಾದಿಸಿದರು.
ಮಳೆಗಾಲ ಅಂತ್ಯ ಕಂಡಿದೆ ಎಂಬ ಭ್ರಮೆಯಿಂದ ಹೊರಬನ್ನಿ ಮುಂದೆಯೂ ಮಳೆ ಬರುವ ಸಾಧ್ಯತೆ ಇದೆ.ಸ್ಥಳೀಯ ಸಂಘ ಸಂಸ್ಥೆಗಳ ಜತೆಗೂಡಿ ಸಂಘಟಿತರಾಗಿ ಸರ್ಕಾರದ ಜೊತೆ ಜೊತೆಯಲ್ಲೇ ಅಕಾಲಿಕವಾಗಿ ಎದುರಾಗುವ ಅತಿವೃಷ್ಟಿಯನ್ನು ತಡೆಗಟ್ಟಬಹುದು ಎಂದರು.
ಅಕ್ರಮ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಹಾಲಪ್ಪ ಹರತಾಳು ಅವರು ರೈತರಿಗೆ ಭರವಸೆ ನೀಡಿದರು.ಆದರೆ ಹೊಸದಾಗಿ ಅರಣ್ಯ ಹಾಗೂ ಸರ್ಕಾರಿ ಜಾಗ ಒತ್ತುವರಿ ಮಾಡುವವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿದೆ ಎಂದರು .
ಈ ಹಿಂದೆ ಅರಣ್ಯ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಸಾಗುವಳಿ ದಾರರ ಮೇಲೆ ಹೂಡಿದ್ದ ಎಲ್ಲಾ ಅರಣ್ಯ ಮೊಕದ್ದಮೆಗಳನ್ನು ಸಹ ಅತಿ ಶೀಘ್ರದಲ್ಲೇ ವಜಾಗೊಳಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ,ಮೆಣಸೆ ಆನಂದ, ಎ.ಟಿ.ನಾಗರತ್ನ,ಉಮೇಶ್ ಜಾಗದ್ದೆ ,ಯೋಗೆಂದ್ರಪ್ಪ ಗೌಡ, ತಹಶೀಲ್ದಾರ್ ಎಸ್.ವಿ.ರಾಜೀವ್, ಜಿ.ಪಂ.ಇ. ವಿಭಾಗದ ಇಂಜಿನಿಯರ್ ಶಿವಮೂರ್ತಿ, ತೋಟಗಾರಿಕಾ ಇಲಾಖೆಯ ಅಧಿಕಾರಿ ಚಂದ್ರಶೇಖರ, ಕೃಷಿ ಇಲಾಖೆಯ ಅಧಿಕಾರಿ ಶಾಂತಕುಮಾರ್,ಉಪತಹಶೀಲ್ದಾರ್ ಟಿ.ಹುಚ್ಚರಾಯಪ್ಪ, ಬೆಳ್ಳೂರು ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಬುಕ್ಕಿವರೆ ರಾಜೇಶ್, ಬೆಳ್ಳೂರು ತಿಮ್ಮಪ್ಪ, ದೇವೇಂದ್ರಪ್ಪಗೌಡ ನೆವಟೂರು, ಗ್ರಾಮ ಲೆಕ್ಕಾಧಿಕಾರಿ ಜಾಕೀರ್,ಹೆಡತ್ರಿ ಷಣ್ಮುಖಪ್ಪ, ಯೋಗೇಂದ್ರ ಬಸವಾಪುರ, ದಿವಾಕರ ಇನ್ನಿತರರು ಹಾಜರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇