ರಿಪ್ಪನ್‌ಪೇಟೆ : ಸರ್ಕಾರಕ್ಕೆ ತೆರಿಗೆಯನ್ನು ವಂಚಿಸುತ್ತಿರುವ ಪಟ್ಟಣದ ವೈಟ್ ಬೋರ್ಡ್ ಕಾನೂನು ಬಾಹಿರ ಟ್ಯಾಕ್ಸಿಗಳು ಪ್ರವಾಸಿ ಸ್ಥಳಗಳಿಗೆ ಬಾಡಿಗೆ ಹೋಗುವುದರ ಬಗ್ಗೆ ಕಾನೂನು ರೀತಿಯ ಕ್ರಮಗಳನ್ನು ಕೈಗೊಂಡು ಅವುಗಳನ್ನು ನಿಷೇಧಿಸಬೇಕೆಂದು ಕರ್ನಾಟಕ ಪ್ರವಾಸಿ ವಾಹನ ಚಾಲಕರ ಸಂಘದ ವತಿಯಿಂದ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಪಿಎಸ್ ಐ ಶಿವಾನಂದ್ ಕೋಳಿ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಪ್ರವಾಸಿ ವಾಹನಗಳ ಸಂಘದ ಜಿಲ್ಲಾಧ್ಯಕ್ಷರಾದ ಕಾರ್ತಿಕ್ ಶೆಟ್ಟಿ ಪ್ರವಾಸಿ ವಾಹನಗಳ ನಿಲ್ದಾಣಗಳಲ್ಲಿ ವೈಟ್‌ಬೋರ್ಡ್ ಖಾಸಗಿ ಲಘು ವಾಹನಗಳನ್ನು ತಂದು ನಿಲ್ಲಿಸಿ, ಪ್ರವಾಸಿಗರನ್ನು ಕರೆದುಕೊಂಡು ವಿವಿಧ ಪ್ರದೇಶಗಳಿಗೆ ಬಾಡಿಗೆ ಪ್ರಯಾಣ ಬೆಳೆಸುವುದು ಕಳೆದ ಹಲವಾರು ವರ್ಷಗಳಿಂದ ನಡೆಯುವ ಒಂದು ಪ್ರಕ್ರಿಯೆಯಾಗಿದೆ. ಈ ಕಾನೂನು ಬಾಹಿರ ಟ್ಯಾಕ್ಸಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಬರುತ್ತಿದೆ. ಇದರಿಂದ ಸರ್ಕಾರಕ್ಕೆ ನಿಗಧಿತ ತೆರಿಗೆ ಕಟ್ಟಿ ವಾಣಿಜ್ಯ ಉದ್ದೇಶಗಳಿಗಾಗಿ ನಿಲ್ದಾಣಗಳಲ್ಲಿ ಬಾಡಿಗೆಯನ್ನು ಕಾಯುತ್ತಾ ನಿಲ್ಲುತ್ತಿರುವ ಪ್ರವಾಸಿ ವಾಹನಗಳಿಗೆ ಯಾವುದೇ ರೀತಿಯ ಕೆಲಸ ಕಾರ್ಯಗಳಾಗಲೀ, ಬಾಡಿಗೆಗಳಾಗಲೀ ಇಲ್ಲವಾಗಿರುತ್ತದೆ.
ಇದರಿಂದಾಗಿ ಪ್ರವಾಸಿ ವಾಹನಗಳ ಜಾಲಕರು ಮತ್ತು ಮಾಲೀಕರುಗಳು ಹಾಗೂ ಅವರನ್ನು ಅವಲಂಬಿತವಾಗಿರುವ ಕುಟುಂಬವರ್ಗದವರು ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತ ನಿರ್ಮಾಣವಾಗಿದೆ. ಕಾರಣ ಖಾಸಗಿ ವೈಟ್‌ಬೋರ್ಡ್ ವಾಹನಗಳು ಕಾನೂನು ಬಾಹಿರವಾಗಿ ಸರ್ಕಾರ ನಿಗಧಿಮಾಡಿದ ಪ್ರವಾಸಿ ವಾಹನಗಳ ದರಗಳಿಗಿಂತ ಬಹಳ ಕಡಿಮೆ ಬಾಡಿಗೆಯನ್ನು ಪಡೆದು ಸಂಚರಿಸುತ್ತಿರುವುದು ಕಾರಣವಾಗಿದೆ. ಅದರಂತೆ ಬ್ಯಾಂಕುಗಳಿಂದ, ಖಾಸಗಿ ಹಣಕಾಸು ಸಂಸ್ಥೆಗಳಿಂದ ವಾಹನ ಸಾಲಗಳನ್ನು ಪಡೆದುಕೊಂಡಿರುವ ಮಾಲೀಕರು ಹಾಗೂ ಚಾಲಕರುಗಳಿಗೆ ಮಾಸಿಕ ಸಾಲದ ಕಂತುಗಳನ್ನು ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಕೂಡಲೇ ಕಾನೂನು ಬಾಹಿರವಾಗಿ ವೈಟ್ ಬೋರ್ಡ್ ವಾಹನಗಳಲ್ಲಿ ಬಾಡಿಗೆ ಮಾಡುತ್ತಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪಿಎಸ್ ಐ ಶಿವಾನಂದ್ ಕೋಳಿ ಕಾನೂನು ಬಾಹಿರವಾಗಿ ಲಘುವಾಹನಗಳಲ್ಲಿ ಬಾಡಿಗೆ ಮಾಡುತ್ತಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರಿಪ್ಪನ್‌ಪೇಟೆಯಲ್ಲಿ ಮನವಿ ಸಲ್ಲಿಸಿದ ನಂತರ ನಗರ ಪೊಲೀಸ್ ಠಾಣೆ ಹಾಗೂ ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ರವರಿಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಪ್ರವಾಸಿ ವಾಹನ ಚಾಲಕರ ಸಂಘದ ಪ್ರಮುಖರಾದ ದೊರೆಸ್ವಾಮಿ,ಮಧುಕುಮಾರ್ ರಿಪ್ಪನ್‌ಪೇಟೆ ,ಗಣೇಶ್ ಕಾರಗೋಡು,ನಾಗರಾಜ್ ಶೆಟ್ಟಿ ,ಸಂತೋಷ್ ಹೆದ್ದಾರಿಪುರ ,ಪ್ರವೀಣ್ ಬಟ್ಟೆಮಲ್ಲಪ್ಪ ,ಗುರುರಾಜ್ ಸೇರಿದಂತೆ ಇನ್ನಿತರರಿದ್ದರು.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್