ರಿಪ್ಪನ್ ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರಮುಖ ಪಟ್ಟಣಗಳಲ್ಲಿ ಒಂದಾದ ರಿಪ್ಪನ್ ಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮದ ಮೊಬೈಲ್ ಗ್ರಾಹಕರುಗಳು ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಆಕಾಶವನ್ನು ನೋಡುತ್ತಿದ್ದಾರೆ.
ಗ್ರಾಹಕರ ಸಮಸ್ಯೆಗೆ ಸ್ಪಂದಿಸದ ಸೇವಾ ಕೇಂದ್ರಗಳು :
ರಿಪ್ಪನ್ ಪೇಟೆ ಯಲ್ಲಿ ಖಾಸಗಿ ಮೊಬೈಲ್ ಕಂಪನಿಗಳಾದ ಏರ್ ಟೆಲ್, ಜಿಯೋ ಸೇರಿದಂತೆ ಬಿಎಸ್ಎನ್ಎಲ್ ಸೇವಾ ಕೇಂದ್ರಗಳು ಇದ್ದರೂ ಸಹ ದಿನನಿತ್ಯ ನೂರಾರು ಬಾರಿ ಮೊಬೈಲ್ ನೆಟ್ವರ್ಕ್ ಗಳ ಸಮಸ್ಯೆಗಳು ಉಂಟಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಸೇವಾಕೇಂದ್ರದ ಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ಸಲ್ಲಿಸಿದರು ಸಹ ಗ್ರಾಹಕರ ಮನವಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಗ್ರಾಹಕರು ದೂರುತ್ತಿದ್ದಾರೆ.
ಹೈರಾಣಾಗುತ್ತಿರುವ ಆಗುತ್ತಿರುವ ಮೊಬೈಲ್ ಗ್ರಾಹಕರುಗಳು :
ಖಾಸಗಿ ಕಂಪನಿಗಳು ಹಾಗೂ ಸರಕಾರಿ ಸ್ವಾಮ್ಯದ ಕಂಪನಿಗಳು ಪಟ್ಟಣದಲ್ಲಿ ಮೊಬೈಲ್ ಟವರ್ ಗಳನ್ನು ನಿರ್ಮಿಸಿದ್ದರು ಸಹ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಇನ್ನೂ ಸಹ ಬಗೆಹರಿದಿಲ್ಲ. ಮೊಬೈಲ್ ಕಂಪನಿಗಳ ಜಾಹಿರಾತು, ಸೇವಾಕೇಂದ್ರದ ಪ್ರತಿನಿಧಿಗಳು ಮೊಬೈಲ್ ಸೇವೆಯ ಕುರಿತು ಕೊಟ್ಟ ಸುಳ್ಳು ಭರವಸೆಗಳಿಗೆ ಮತ್ತು ಪ್ರಚಾರಕ್ಕೆ ಮರುಳಾದ ಗ್ರಾಹಕರುಗಳು ಸಾವಿರಾರು ರೂಪಾಯಿಗಳ ಮೌಲ್ಯದ ಮೊಬೈಲ್ ಗಳನ್ನು ಕೊಂಡುಕೊಂಡು ನೂರಾರು ರೂಪಾಯಿಗಳ ಮೌಲ್ಯದ ಕರೆನ್ಸಿಯನ್ನು ಹಾಕಿಕೊಂಡು ನೆಟ್ ವರ್ಕ್ ಸಮಸ್ಯೆಯಿಂದ ಹೈರಾಣಾಗುತ್ತಿದ್ದಾರೆ.
ಸರ್ಕಾರಿ ಕಚೇರಿಗಳ ಹಾಗೂ ಖಾಸಗಿ ಸಂಸ್ಥೆಗಳ ಎಲ್ಲಾ ಕೆಲಸ ಕಾರ್ಯಗಳು ಕಂಪ್ಯೂಟರ್ ಕೃತ ವಾಗಿರುವುದರಿಂದ ದಿನನಿತ್ಯ ಸರ್ಕಾರಿ ಕಚೇರಿಗಳಿಗೆ ವಿವಿಧ ಕಾರ್ಯನಿಮಿತ್ತ ಬರುವ ನಾಗರಿಕರುಗಳಿಗೆ ವಿದ್ಯಾರ್ಥಿಗಳಿಗೆ ನೆಟ್ ವರ್ಕ್ ಸಮಸ್ಯೆಗಳಿಂದ ಪರಿತಪಿಸುತ್ತಿದ್ದಾರೆ. ಅದರಲ್ಲೂ ನಾಡ ಕಚೇರಿ, ಸರಕಾರಿ ಸ್ವಾಮ್ಯದ ಹಾಗೂ ಖಾಸಗಿ ಬ್ಯಾಂಕುಗಳು. ಆಸ್ಪತ್ರೆಗಳು. ಪಂಚಾಯಿತಿ. ಕೃಷಿ ಇಲಾಖೆ ಆರೋಗ್ಯ ಇಲಾಖೆ. ಹಾಗೂ ಶಾಲಾ-ಕಾಲೇಜುಗಳಿಗೆ ವಿವಿಧ ಕಾರ್ಯನಿಮಿತ್ತ ಬರುವ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಮೊಬೈಲ್ ನೆಟ್ ವರ್ಕ್ ನ ಸಮಸ್ಯೆಗಳನ್ನು ಹೇಳಿ ಹೇಳಿ ಕಚೇರಿ ಅಧಿಕಾರಿಗಳು ಸುಸ್ತಾಗಿ ಹೋಗಿದ್ದಾರೆ.
ಚುನಾಯಿತ ಪ್ರತಿನಿಧಿಗಳ ಮನವಿಗೂ ಸ್ಪಂದಿಸದ ಮೊಬೈಲ್ ಸಂಸ್ಥೆಗಳು :
ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಹಾಗೂ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ರವರಿಗೆ ರಿಪ್ಪನ್ ಪೇಟೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಉಂಟಾಗುತ್ತಿರುವ ಮೊಬೈಲ್ ಸಮಸ್ಯೆಗಳ ಬಗ್ಗೆ ನೂರಾರು ಬಾರಿ ನಾಗರಿಕರು ಮತ್ತು ವಿದ್ಯಾರ್ಥಿಗಳು ಮನವಿಯನ್ನು ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಚುನಾಯಿತ ಪ್ರತಿನಿಧಿಗಳು ಸಂಬಂಧಪಟ್ಟ ಮಂತ್ರಿಗಳಿಗೆ ಹಾಗೂ ಅಧಿಕಾರಿಗಳಿಗೆ ಇಲಾಖೆಗಳಿಗೆ ಖಾಸಗಿ ಮೊಬೈಲ್ ಸಂಸ್ಥೆಗಳಿಗೆ ನೆಟ್ ವರ್ಕ್ ಸಮಸ್ಯೆ ಬಗೆಹರಿಸುವಂತೆ ಮನವಿಯನ್ನು ಸಲ್ಲಿಸಿದರೂ ಸಹ ಅವರ ಮನವಿಗಳಿಗೂ ಸಹ ಸ್ಪಂದಿಸದ ಮೊಬೈಲ್ ಸಂಸ್ಥೆಯವರು ಇದುವರೆಗೂ ನೆಟ್ ವರ್ಕ್ ಸಮಸ್ಯೆಗಳನ್ನು ಬಗೆಹರಿಸಿಲ್ಲ.
ಧಿಮಾಕಿನ ಉತ್ತರ ನೀಡುತ್ತಿರುವ ಸೇವಾಕೇಂದ್ರದ ಪ್ರತಿನಿಧಿಗಳು :
ಮೊಬೈಲ್ ನೆಟ್ವರ್ಕ್ ಸಮಸ್ಯೆಯ ಕುರಿತು ನಾಗರಿಕರು ಹಾಗೂ ವಿದ್ಯಾರ್ಥಿಗಳು ಮೊಬೈಲ್ ಸೇವಾ ಕೇಂದ್ರದ ಪ್ರತಿನಿಧಿಗಳ ಬಳಿಗೆ ಹೋಗಿ ಪ್ರತಿ ತಿಂಗಳು ನೂರಾರು ರೂಪಾಯಿಗಳ ಮೊಬೈಲ್ ಕರೆನ್ಸಿ ಹಾಕಿಸಿಕೊಂಡರು ಸಹ ನೆಟ್ ವರ್ಕ್ ಸಮಸ್ಯೆ ಇದೆ ಎಂದು ದೂರು ಸಲ್ಲಿಸಿದರೆ ಅವರು ದಿಮಾಕಿನ ಉತ್ತರವನ್ನು ನೀಡಿ ಸಾಗುಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಹಾಗೂ ನಾಗರಿಕರು ದೂರಿದ್ದಾರೆ.
ಸಿಡಿದೆದ್ದು ಮೊಬೈಲ್ ಸೇವಾ ಕೇಂದ್ರಗಳಿಗೆ ಬೀಗ ಜಡಿಯಲು ಸನ್ನದ್ಧರಾಗುತ್ತಿರುವ ಗ್ರಾಹಕರುಗಳು :
ರಿಪ್ಪನ್ ಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೊಬೈಲ್ ನೆಟ್ ವರ್ಕ್ ನ ಸಮಸ್ಯೆಗಳು ನಿನ್ನೆ ಮೊನ್ನೆಯದಲ್ಲ ಕಳೆದ ಕೆಲವು ವರ್ಷಗಳಿಂದ ಉಂಟಾಗಿರುವವಂತಹ ಸಮಸ್ಯೆಗಳು ಮೊಬೈಲ್ ಸೇವಾ ಕೇಂದ್ರದ ಪ್ರತಿನಿಧಿಗಳಿಗೆ ಹಾಗೂ ಕಂಪನಿಗಳಿಗೆ ನೂರಾರು ಬಾರಿ ದೂರುಗಳನ್ನು ಸಲ್ಲಿಸದರು ಸಹ ಕವಡೆ ಕಾಸಿನ ಕಿಮ್ಮತ್ತು ನೀಡದೇ ಇದುವರೆಗೂ ಮೊಬೈಲ್ ನೆಟ್ ವರ್ಕ್ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಮೊಬೈಲ್ ನೆಟ್ ವರ್ಕ್ ಸಮಸ್ಯೆಗಳನ್ನು ಬಗೆಹರಿಸಿ ಉತ್ತಮ ಮೊಬೈಲ್ ನೆಟ್ ವರ್ಕ್ ಸೌಲಭ್ಯವನ್ನು ನೀಡದಿದ್ದರೆ ವಿವಿಧ ಕಂಪನಿಗಳ ಮೊಬೈಲ್ ಸೇವಾ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟನೆಗಳಿಗೆ ಸಜ್ಜಾಗುತಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ರವಿ ಆರ್ ಆಚಾರ್ ಗುಡುಗಿದ್ದಾರೆ.
ಮೊಬೈಲ್ ಕಂಪನಿಗಳು ಜಾಹಿರಾತುಗಳಲ್ಲಿ ಭರವಸೆ ನೀಡುವಂತೆ ಉತ್ತಮ ರೀತಿಯಲ್ಲಿ ನೆಟ್ ವರ್ಕ್ ಸೌಲಭ್ಯಗಳನ್ನು ನೀಡುವ ಮೂಲಕ ಗ್ರಾಹಕರ ಜೊತೆ ಸಹಕರಿಸಬೇಕು ಎಂದು ಗ್ರಾಪಂ ಸದಸ್ಯ ಆಸೀಫ಼್ ಭಾಷಾಸಾಬ್ ಮನವಿ ಮಾಡಿದ್ದಾರೆ.
ಒಟ್ಟಾರೆಯಾಗಿ ಕೇವಲ ಹಣ ಪಡೆದು ಕರೆನ್ಸಿ ಹಾಕುವ ಸೇವಾಕೇದ್ರಗಳಲ್ಲಿ ನೆಟ್ ವರ್ಕ್ ಸಮಸ್ಯೆಯನ್ನು ಆಲಿಸಿ ಬಗೆಹರಿಸುವ ಒಬ್ಬರನ್ನು ನಿಯುಕ್ತಿಗೊಳಿಸಿದಲ್ಲಿ ಹಳ್ಳಿಗಾಡಿನಲ್ಲಿರುವ ನೆಟ್ ವರ್ಕ್ ಸಮಸ್ಯೆಗೆ ಪರಿಹಾರ ದೊರಕಬಹುದು.ಇನ್ನಾದರೂ ಮೊಬೈಲ್ ಕಂಪನಿಗಳ ಸೇವಾ ಪ್ರತಿನಿಧಿಗಳು ಹಾಗೂ ಕಂಪನಿಗಳ ಕಾರ್ಯನಿರ್ವಹಣೆ ಅಧಿಕಾರಿಗಳು ಮೊಬೈಲ್ ನೆಟ್ ವರ್ಕ್ ಸಮಸ್ಯೆಗಳನ್ನು ಬಗೆಹರಿಸುತ್ತಾರ ಕಾದುನೋಡಬೇಕು….
ನೆಟ್ ವರ್ಕ್ ಸಮಸ್ಯೆ ಬಗ್ಗೆ ಗ್ರಾಹಕರ ಆರೋಪದ ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇