ನವದೆಹಲಿಯಲ್ಲಿ ಸೋಮವಾರ ಮುಕ್ತಾಯಗೊಂಡ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಕಾವ್ಯ ಕೆ ಎನ್ ದ್ವಿತೀಯ ಸ್ಥಾನವನ್ನು ಗಳಿಸುವ ಮೂಲಕ ಬೆಳ್ಳಿ ಪದಕವನ್ನು ಗಳಿಸಿದ್ದು ಕರ್ನಾಟಕ ರಾಜ್ಯದ ಹೆಸರನ್ನು ಮೆರೆದಿದ್ದಾಳೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಕಾವ್ಯ ಕೆ ಎನ್ ಮೂರು ಬಾರಿ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಈ ಪ್ರತಿಭಾವಂತೆ ರಾಷ್ಟ್ರ ಮಟ್ಟದಲ್ಲಿ 5 ಬಾರಿ ಪ್ರಥಮ ಸ್ಥಾನವನ್ನು, 4 ಬಾರಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾಳೆ. 2020 ರಲ್ಲಿ ವರ್ಲ್ಡ್ ರೆಕಾರ್ಡ್ ಇಂಡಿಯಾ ಅಟೆಂಪ್ಟ್ ನಲ್ಲಿ ಭಾಗವಹಿಸಿ ವಿಶ್ವ ದಾಖಲೆಯನ್ನೂ ಸಹ ಮಾಡಿದ್ದಾಳೆ.
ಕಾವ್ಯ ಕೆ ಎನ್ ಗರ್ತಿಕೆರೆ ಸಮೀಪದ ಎಣ್ಣೆನೋಡ್ಲು ಗ್ರಾಮದ ಅತಿ ಬಡ ಕುಟುಂಬದವಳಾಗಿದ್ದು ಹುಂಚದ ಕಟ್ಟೆಯ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿನಿಯಾಗಿದ್ದು,ಈ ಬಾರಿ SSLC ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದುಕೊಂಡಿದ್ದಳು.