ಮಲೆನಾಡಿನ ತವರೂರು ಹೊಸನಗರಕ್ಕೆ ಶರಾವತಿಯ ಶಾಪ ಮುಗಿದರೂ, ರಾಜಕೀಯದ ಶಾಪ ಮಾತ್ರ ಇನ್ನೂ ಮುಗಿವಂತೆ ಕಾಣುತ್ತಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಹೊಸನಗರ ಅಭಿವೃದ್ಧಿಯಾಗುತ್ತಿಲ್ಲ. ಬದಲಾಗಿ ಅಲ್ಲಿರುವುದನ್ನೆಲ್ಲವೂ ಸ್ಥಳಾಂತರ ಮಾಡಲಾಗುತ್ತಿದೆ. ಅದು ಕೂಡ ಸಮರ್ಪಕ ಕಾರಣಗಳಿಲ್ಲದೆ.
ಈ ಹಿಂದೆ ವಿಧಾನಸಭೆ ಕ್ಷೇತ್ರವನ್ನೆ ಕಿತ್ತುತೆಗೆದು,ಹೊಸನಗರ ತಾಲ್ಲೂಕನ್ನು ಬೇರೆ ಬೇರೆ ಕ್ಷೇತ್ರಗಳಿಗೆ ಚಾಕಲೇಟ್ ರೀತಿಯಲ್ಲಿ ಹಂಚಲಾಗಿತ್ತು. ಇದೀಗ, ತಾಲ್ಲೂಕಿನ ಎಪಿಎಂಸಿಯನ್ನು ಪಕ್ಕದ ಸಾಗರ ತಾಲ್ಲೂಕಿನ ಎಪಿಎಂಸಿ ಜೊತೆ ವಿಲೀನಗೊಳಿಸಲಾಗಿದೆ. ವಿಶೇಷ ಅಂದರೆ, ಇದಕ್ಕೆ ಯಾವುದೇ ಚರ್ಚೆ ನಡೆದಿಲ್ಲ ಎಂಬುದು ಹೊಸನಗರ ನಾಗರಿಕರ ಆರೋಪ.
ಇನ್ನೂ ಅತ್ತ ಸಾಗರದಲ್ಲಿಯು ಹೊಸನಗರ ಎಪಿಎಂಸಿ ವಿಲೀನವಾಗುವುದಕ್ಕೆ ಸ್ಪಷ್ಟ ವಿರೋಧವಿದೆ. ಇತ್ತ ಜನರಿಂದಲೂ ವಿರೋಧ, ಅತ್ತ ಸಾಗರದವರಿಂದಲೂ ವಿರೋಧವಿದ್ದರೂ ಯಾರಿಗಾಗಿ ಎಪಿಎಂಸಿಯನ್ನು ಸಾಗರದ ಜೊತೆ ವಿಲೀನ ಮಾಡಲಾಗುತ್ತಿದೆ ಎಂಬುದು ಪ್ರಶ್ನೆ.
ಹೊಸನಗರ ಕ್ಷೇತ್ರವನ್ನು ಕಡೆಗಣಿಸುತ್ತಿರುವ ಹಿನ್ನಲೆಯಲ್ಲಿ ಆಕ್ರೋಶದ ಮಾತುಗಳು ಪ್ರತಿಭಟನೆಯಾಗಿ ಹೊರಹೊಮ್ಮುತ್ತಿದೆ. ಈ ನಿಟ್ಟಿನಲ್ಲಿ ಇಂದು ಕಾಂಗ್ರೆಸ್ ನ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪನವರು ತಮ್ಮ ಅನಾರೋಗ್ಯದ ನಡುವೆಯು ಪ್ರತಿಭಟನೆ ನಡೆಸಿದ್ದಾರೆ.
ಹೊಸನಗರದ ಎಪಿಎಂಸಿಯ ಎದುರು ಪ್ರತಿಭಟನೆ ನಡೆಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಹಾಗೂ ಮಾಜಿ ಶಾಸಕರು,ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಟ, ಆಡಳಿತ ವ್ಯವಸ್ಥೆಯ ವಿರುದ್ಧ ಸಿಟ್ಟು ಹೊರಹಾಕಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಸ್ಥಾಪಿತವಾಗಿ ಉತ್ತಮ ರೀತಿಯಲ್ಲಿ ರೈತರಿಗೆ ಸೇವೆ ಸಲ್ಲಿಸುತ್ತಿರುವ ಕೃಷಿ ಉತ್ಪನ ಮರುಕಟ್ಟೆಯನ್ನು ಸಾಗರದ ಕೃಷಿ ಉತ್ಪನ್ನ ಮಾರುಕಟ್ಟೆಯೊಂದಿಗೆ ವಿಲಿನಗೊಳಿಸುವ ಸಂಚು ನಡೆದಿದೆ. ಅಲ್ಲದೇ ರಾಣಿಬಿನ್ನೂರು ನಿಂದ ಬೈಂದೂರು ರಾಷ್ಟ್ರೀಯ ಹೆದ್ದಾರಿಯನ್ನು ಹೊಸನಗರ ಟೌನ್ ಬಿಟ್ಟು ಮಾವಿನಕೊಪ್ಪ ದಿಂದ ಬೈಪಾಸ್ ರಸ್ತೆ ನಿರ್ಮಿಸಲು ಉದ್ದೇಶಿಸಿರುವ ಕ್ರಮವನ್ನು ಖಂಡಿಸಿ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.
ಈ ಪ್ರತಿಭಟನೆಯಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ ಜಿ ನಾಗರಾಜ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಕಲಗೋಡು ರತ್ನಾಕರ್, ಡಾ. ರಾಜನಂದಿನಿ ಹಾಗೂ ಬಿ ಪಿ ರಾಮಚಂದ್ರ,ಉಬೇದುಲ್ಲಾ ಷರೀಫ಼್, ಬಿ ಜಿ ಚಂದ್ರಮೌಳಿ,ಆಸೀಫ಼್ ಭಾಷಾಸಾಬ್ ,ಮಧುಸೂದನ್, ಉಲ್ಲಾಸ್ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಉಪಸ್ಥಿತಿ ಇದ್ದರು.
ಎಪಿಎಂಸಿ ಮಾರುಕಟ್ಟೆಯನ್ನು ಸಾಗರಕ್ಕೆ ಸಂಯೋಜಿಸಿರುವ ಕ್ರಮವನ್ನು ಖಂಡಿಸಿ ರಿಪ್ಪನ್‌ಪೇಟೆಯಲ್ಲಿ ಜೆಡಿಎಸ್ ಪ್ರತಿಭಟನೆ
2005-06 ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದ ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಒಂದು ವರ್ಷದ ಅವಧಿ ಮಾತ್ರ ನಾಮ ನಿರ್ದೇಶನ ಮಂಡಳಿ ಕಾರ್ಯನಿರ್ವಹಿಸಿದ್ದು ಉಳಿದ ಮೂರು ಅವಧಿಗೆ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ಕಾರ್ಯನಿರ್ವಹಿಸಿದೆ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆದರ ನಿಗದಿಗೊಳಿಸಿ ನ್ಯಾಯ ಬದ್ದ ಮಾರುಕಟ್ಟೆ ಒದಗಿಸಿ ಸಹಾಯ ಮಾಡುವಂತೆ ದೀರ್ಘಕಾಲದಿಂದ ಹೋರಾಟ ಮಾಡುತ್ತಿದ್ದು ಹೊಸನಗರ ತಾಲ್ಲೂಕಿನ ರೈತರ ಮನವಿಗೆ ಸ್ಪಂದಿಸಿ ಸಾಗರ ಮಾರುಕಟ್ಟೆ ಸಮಿತಿಗೆ ಸಂಯೋಜನೆಗೊಂಡಿದ್ದ ಹೊಸನಗರ ತಾಲ್ಲೂಕ್ ಮಾರುಕಟ್ಟಯನ್ನು ಪ್ರತ್ಯೇಕಿಸಿ ರಾಜ್ಯದ ಉಪಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಹೊಸನಗರ ತಾಲ್ಲೂಕಿನ ಸ್ವಾಯುತ್ತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಮಂಜೂರು ಮಾಡಿದ್ದು ಈಗ ಏಕಾಏಕಿ ಪುನಃ ಸಾಗರ ಎಪಿಎಂಸಿ ಮಾರುಕಟ್ಟೆಗೆ ಸಂಯೋಜಿಸಿರುವ ಕ್ರಮವನ್ನು ವಿರೋಧಿಸಿ ಸೋಮವಾರ ರಾಜ್ಯ ಜೆಡಿಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಅರ್.ಎ.ಚಾಬುಸಾಬ್ ತಾಲ್ಲೂಕ್ ಜೆಡಿಎಸ್ ಅಧ್ಯಕ್ಷ ಎನ್.ವರ್ತೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಾಡಕಛೇರಿಯ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಹೊಸನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಸ್ಥಿತ್ವಕ್ಕೆ ಬಂದಮೇಲೆ ಕೃಷಿ ಮಾರುಕಟ್ಟಯಲ್ಲಿಯೇ ನ್ಯಾಯ ಬೆಲೆಯಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿದ್ದು ವಾರ್ಷೀಕ 5-6 ಕೋಟಿ ರೂಪಾಯಿಗಳಿಗೂ ಅಧಿಕ ವರಮಾನ ಸರ್ಕಾರಕ್ಕೆ ಜಮಾ ಆಗುತ್ತಿದೆ. ಸುವ್ಯವಸ್ಥೆಯ ಮಾರುಕಟ್ಟೆ ಪ್ರಾಂಗಣಗಳು ದಸ್ತಾನು ಮಳಿಗೆಗಳಿದ್ದು ಸರ್ವಕಾಲಕ್ಕೂ ಶೇಖರಿಸಿ ಸಂರಕ್ಷಿಸಬಲ್ಲ ಉನ್ನತ ಮಟ್ಟದ ತಾಂತ್ರಿಕ ಗೋದಾಮುಗಳಿವೆ ತಾಲ್ಲೂಕಿನ ರಿಪ್ಪನ್‌ಪೇಟೆ ಹೋಬಳಿ ಕೇಂದ್ರವಾದರೂ ಶಿವಮೊಗ್ಗ ಸಾಗರ-ತೀರ್ಥಹಳ್ಳಿ ಮುಂತಾದ ಊರುಗಳಿಗೆ ಸಂಪರ್ಕ ಕೇಂದ್ರವಾಗಿದ್ದು ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಶುಂಠಿ ಬೆಳೆಯುವ ಪ್ರದೇಶವಾಗಿದೆ. ರಿಪ್ಪನ್‌ಪೇಟೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣವು ಉತ್ನತ ಶ್ರೇಣಿಯ ತಾಂತ್ರಿಕ ಗೋದಾಮುಗಳನ್ನು ಹೊಂದಿದ್ದು ಆಹಾರ ಪದಾರ್ಥಗಳು ಕೆಡದಂತೆ ಇಡುವ ಶೈತ್ಯಾಗಾರ ಘಟಕಗಳು ರೈತರಿಗೆ ದೊಡ್ಡಪ್ರಮಾಣದಲ್ಲಿ ಸಹಕಾರಿಯಾಗಿದ್ದು ಇದನ್ನು ಹೊಸನಗರದಲ್ಲಿಯೇ ಉಳಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ವಿವರಿಸಿರುವ ಮನವಿಯನ್ನು ಸಲ್ಲಿಸುತ್ತಿರುವುದಾಗಿ ಪ್ರತಿಭಟನಾ ನಿರತರು ವಿವರಿಸಿದರು.
ಈ ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಜಿ.ಎಸ್.ವರದರಾಜ್, ಜನಪರ ವೇದಿಕೆ ಅಧ್ಯಕ್ಷ ಆರ್.ಎನ್.ಮಂಜುನಾಥ, ಹೋರಾಟಗಾರ ಟಿ.ಆರ್.ಕೃಷ್ಣಪ್ಪ, ಮಂಜೋಜಿರಾವ್, ದೂನ ಕುಮಾರ, ಮಂಜುನಾಥ ಆಚಾರ್ ನೆವಟೂರು ಇನ್ನಿತರರು ಪಾಲ್ಗೊಂಡಿದ್ದರು.