ರಿಪ್ಪನ್ ಪೇಟೆ : ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಆಂಜನೇಯರವರು ನಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶುಶ್ರೂಷಕಿಯರು ಗ್ರಾಮ ಪಂಚಾಯತ್ ನ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿರುವ ಘಟನೆ ಇಂದು ನಡೆದಿದೆ.
ಆಸ್ಪತ್ರೆಯ ವೈದ್ಯರು ಹೆಚ್ಚುವರಿ ಕೆಲಸ ನೀಡಿದಾಗ ವಿರೋದ ವ್ಯಕ್ತಪಡಿಸಿದರೆ ಏಕವಚನದಲ್ಲಿ ನಿಂದಿಸುವುದಲ್ಲದೇ ಸಾರ್ವಜನಿಕರ ಸಮ್ಮುಖದಲ್ಲಿ ಅಗೌರವ ಸೂಚಕ ಪದದಲ್ಲಿ ನಿಂದಿಸಿ,ಸಂಬಳ ಹಾಜರಾತಿಗೆ ಸಹಿ ಹಾಕುವುದಿಲ್ಲ ಎಂದು ಬೆದರಿಕೆ ಹಾಕುವ ಮೂಲಕ ಮಾನಸಿಕ ಕಿರುಕುಳ ನೀಡುತಿದ್ದಾರೆ.
ಆದ್ದರಿಂದ ಗ್ರಾಮ ಪಂಚಾಯತ್ ಆರೋಗ್ಯ ರಕ್ಷಾ ಸಮಿತಿ ಈ ಬಗ್ಗೆ ಗಮನಹರಿಸಿ ಸೂಕ್ತ ನ್ಯಾಯ ಒದಗಿಸಿಕೊಡಬೇಕೆಂದು ರಿಪ್ಪನ್ ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯರಾದ ಸುಮಯ್ಯ ಹಾಗೂ ಅಂಜನಮ್ಮ ರವರು ಮನವಿ ಸಲ್ಲಿಸಿದ್ದಾರೆ.
ಮನವಿ ಪತ್ರವನ್ನು ಆಡಳಿತ ವೈದ್ಯಾಧಿಕಾರಿಗಳು ರಿಪ್ಪನ್ ಪೇಟೆ,DHO,THO ಹಾಗೂ ಗ್ರಾಮ ಪಂಚಾಯತ್ ಆರೋಗ್ಯ ರಕ್ಷಾ ಸಮಿತಿಯವರಿಗೆ ನೀಡಿದ್ದಾರೆ.
ಮನವಿ ಪತ್ರದ ಸಾರಾಂಶ :
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಲ್ಕು ಜನ ಶುಶ್ರೂಷಕಿಯರು ಇದ್ದು, ಇದರಲ್ಲಿ ಒಬ್ಬರು ಶುಶ್ರೂಷಕಿ ತಾತ್ಕಾಲಿಕವಾಗಿ ನಿಯೋಗವಾಗಿದ್ದು ಸತತ ಐದು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಾಲ್ಕು ಜನ ಶುಶ್ರೂಷಕಿಯಲ್ಲಿ ಒಬ್ಬರೂ ವಾರಕ್ಕೆ ಒಂದು ರಜೆ ತೆಗೆದುಕೊಂಡರೂ ಮೂರು ಜನ ಶುಶ್ರೂಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದೇವೆ.
ಆಸ್ಪತ್ರೆಯಲ್ಲಿ ಫಾರ್ಮ್ಸಿಸ್ಟ್ ಇದ್ದರೂ ಸರಿಯಾಗಿ ಬರುವುದಿಲ್ಲ. ರೋಗಿಗಳಿಗೆ ಔಷಧಿಗಳನ್ನು ನಾವೇ ವಿತರಿಸಬೇಕು. ರೋಗಿಗಳ ಬಿಪಿ ನಾವೇ ನೋಡಬೇಕು. ಓಪಿಡಿ, ಐಪಿಡಿ, ಎಮರ್ಜೆನ್ಸಿ (ವಿಷ ಸೇವನೆ, ಜೇನು ಕಡಿತ, ಹಾವು ಕಡಿತ, ನಾಯಿ ಕಡಿತ, ಹೊಡೆದಾಟ, ಮಧ್ಯಪಾನ ಸೇವನೆ ಮಾಡಿದವರು, ಆಕಸ್ಮಿಕ ಅಪಘಾತ ಕೀಡಾದವರು, ಒಂದು ವರ್ಷದೊಳಗಿನ ಸಣ್ಣ ಮಕ್ಕಳು, ಗರ್ಭಿಣಿಯರು) ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡು ಮೂರು-ನಾಲ್ಕು ದಿನದ ಔಷೋದೋಪಾಚಾರಗಳಿಗೆ ಇಲ್ಲಿಗೆ ಬರುತ್ತಿದ್ದು, ಎಲ್ಲಾ ಕಡೆಯಲ್ಲಿಯೂ ಒಬ್ಬರೇ ಶುಶ್ರೂಷಕಿ ಕೆಲಸ ನಿರ್ವಹಿಸಬೇಕಾಗಿರುತ್ತದೆ.
ಸುತ್ತ ಮುತ್ತ ಹಳ್ಳಿ ಅಂದರೆ ಕೋಡೂರು -ರಿಪ್ಪನ್‌ಪೇಟೆ, ಸೂಡೂರು, ನೆವಟೂರು-ಗರ್ತಿಕೆರೆ, ಹುಂಚದ ಕಟ್ಟೆ, ಈ ಎಲ್ಲಾ ಊರಿನ ರೋಗಿಗಳು ಸದರಿ ಆಸ್ಪತ್ರೆಗೆ ಬರುತ್ತಿದ್ದು, ಒಂದು ದಿನಕ್ಕೆ 150-200 ರೋಗಿಗಳನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ಇದರ ಜೊತೆಗೆ ಕೋವಿಡ್ ವ್ಯಾಕ್ಸಿನ್, ಕೋವಿಡ್ ಟೆಸ್ಟ್ ಓಪಿಡಿ ಸ್ಲಿಪ್, ಇಂತಹ ಹೆಚ್ಚುವರಿ ಕೆಲಸಕ್ಕೆಲ್ಲಾ ನಮ್ಮನ್ನೇ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ನಮಗೆ ಮಾನಸಿಕ ಒತ್ತಡ ಹೆಚ್ಚಾಗಿದ್ದು, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ.
24 X 7 ನಲ್ಲಿ ಶುಶ್ರೂಷಕಿಯರು ನಿರ್ವಹಿಸಬೇಕಾದ ಕೆಲಸವನ್ನು ಹೊರತು ಪಡಿಸಿ ಇನ್ಯಾವುದೇ ರೀತಿಯ ಕೆಲಸವನ್ನು ಮಾಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದಕ್ಕೆ ತಿಂಗಳ ಸಂಬಳದ ಹಾಜರಾತಿಗೆ ಸಹಿ ಮಾಡುವುದಿಲ್ಲ ಎಂದು ಡಾ|| ಆಂಜನೇಯ ಅತ್ತಾರೆ. ವರು ಏಕ ವಚನದಿಂದ ನಮ್ಮನ್ನು ನಿಂದಿಸಿ ಮತ್ತು ಶುಶ್ರೂಷಕಿ ಅಂಜನಮ್ಮ ಇವರನ್ನು ಈ ಮೇಲ್ಕಂಡ ಕೆಲಸವನ್ನು ಮಾಡದಿದ್ದಲ್ಲಿ ನಿಮ್ಮನ್ನು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ, ಮಾರುತಿಪುರ ಇಲ್ಲಿಗೆ ಪುನಃ ವರ್ಗಾಯಿಸಲಾಗುವುದೆಂದು ನಮ್ಮನ್ನು ಹೆದರಿಸಿರುತ್ತಾರೆ. ಇದರಿಂದ ನಮ್ಮ ಗೌರವಕ್ಕೆ ಧಕ್ಕೆ ಉಂಟಾಗಿರುತ್ತದೆ. ಸಾರ್ವಜನಿಕರು ಹಾಗೂ ರೋಗಿಗಳ ಮುಂದೆ ನಾವು ಹೆಣ್ಣು ಮಕ್ಕಳೆಂದು ತಿಳಿದರೂ ಸಹ ನಮಗೆ ಅಗೌರವವನ್ನು ಸೂಚಿಸಿರುತ್ತಾರೆ.
ಆದ್ದರಿಂದ ತಾವುಗಳು ಪರಿಶೀಲಿಸಿ ಈ ನಾಲ್ಕು ಜನ ಶುಶ್ರೂಷಕಿಯರು ಆಸ್ಪತ್ರೆಯಲ್ಲಿ 24 ಗಂಟೆಯ ನಮ್ಮ ಕೆಲಸವನ್ನು ಹೊರತು ಪಡಿಸಿ ಇನ್ನಾವುದೇ ರೀತಿಯ ಕೆಲಸಕ್ಕೆ ತೊಡಗಿಸಿಕೊಳ್ಳದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ತಾವುಗಳು ಗಮನಹರಿಸಿ ನಮಗೆ ನ್ಯಾಯವನ್ನು ದೊರಕಿಸಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.