ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಸವೆ ಗ್ರಾಮದ ಕುಂಟಿಗೆ ವಾಸಿಯಾದ ವಿದ್ಯಾಶ್ರೀ (21) ಎಂಬ ವಿದ್ಯಾರ್ಥಿನಿ ಪಾಗಲ್ ಪ್ರೇಮಿಯೊಬ್ಬನ ಕಾಟಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ವಸವೆ ಗ್ರಾಮದ ವಿದ್ಯಾಶ್ರೀ ಹೊಸನಗರ ಪಟ್ಟಣದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಅವಳ ನೆರೆಮನೆಯಾತ ಶಶಾಂಕ್ ಎಂಬಾತನು ಪ್ರತಿದಿನ ಕಾಲೇಜಿಗೆ ಹೋಗಿ ಬರುವಾಗ ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪೀಡಿಸುತ್ತಿದ್ದ ಹಾಗೂ ಬೆದರಿಕೆ ಹಾಕುತ್ತಿದ್ದನು ಈ ಹಿನ್ನಲೆಯಲ್ಲಿ ಮನನೊಂದ ವಿದ್ಯಾಶ್ರೀ ಕಳೆದ ತಿಂಗಳು ಏಪ್ರಿಲ್ 19ರಂದು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆತ್ನಿಸಿದ ಕಾರಣ ಮನೆಯವರು ಆಕೆಯನ್ನು ತಕ್ಷಣ ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ ಉನ್ನತ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಶ್ರೀ ಸಹೋದರ ರಕ್ಷಿತ್ ಇಂದು ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಿ ತನ್ನ ತಂಗಿಯ ಸಾವಿಗೆ ಕಾರಣರಾದ ಶಶಾಂಕ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾನೆ.