ಹೊಸನಗರ ತಾಲ್ಲೂಕಿನಲ್ಲಿ ಭೂ ಅಕ್ರಮ ಒತ್ತುವರಿದಾರರ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ಅಧಿಕಾರಿಗಳೇ ಭೂ ಅಕ್ರಮ ಕಬಳಿಕೆಗೆ ಸಾಥ್ ನೀಡುತ್ತಾ ಸಾರ್ವಜನಿಕರಿಗೆ, ಸರ್ಕಾರಕ್ಕೆ ವಂಚನೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿ.
ಇತ್ತೀಚೆಗೆ ತಾಲ್ಲೂಕಿನ ಮೂಡುಗೊಪ್ಪ ಗ್ರಾಮ ಪಂಚಾಯ್ತಿಯ ಪಿಡಿಓ ಹಣದಾಸೆಗೆ ಬಿದ್ದು, ಬದುಕಿದ್ದವರೇ ಸತ್ತಿದ್ದಾರೆಂದು ವರದಿ ನೀಡಿ ಯಾರದ್ದೋ ಆಸ್ತಿಯನ್ನು ಮತ್ಯಾರಿಗೋ ಬರೆದುಕೊಟ್ಟಿದ್ದನ್ನು ಕೆಲ ಮಾಧ್ಯಮಗಳು ವರದಿ ಮಾಡಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಈ ಅಕ್ರಮವನ್ನೂ ಕೂಡಾ ಅದೇ ಪಿಡಿಓ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮೂಡುಗೊಪ್ಪ (ನಗರ) ಗ್ರಾಮ ಪಂಚಾಯ್ತಿಯ ಪಿಡಿಓ ವಿಶ್ವನಾಥ್, ಯಾರದ್ದೋ ಆಸ್ತಿಯನ್ನು ಮತ್ಯಾರದ್ದೋ ಹೆಸರಿಗೆ 9/11 ದಾಖಲೆ ನೀಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹೌದು! ಹೊಸನಗರದ ಹಿರೇಮಠ ಸ್ಮಶಾನದ ಬಳಿಯ ವಾಸಿಯಾಗಿದ್ದ ವಿಲಿಯಂ ಎಂಬ ವ್ಯಕ್ತಿ 2015ರಲ್ಲೇ ಮೃತಪಟ್ಟಿದ್ದರು. ಇವರಿಗೆ ರೇಷ್ಮಾ ಮತ್ತು ರೋಹನ್ ಎಂಬ ಇಬ್ಬರು ಮಕ್ಕಳು ಮತ್ತು ರಾಕೇಶ್ ಎಂಬ ದತ್ತು ಪುತ್ರನಿದ್ದಾನೆ. ವಿಲಿಯಂ ಜೀವಿತಾವಧಿಯಲ್ಲಿ ಹಲವಾರು ಬಾರಿ ಈ ಜಾಗದಲ್ಲಿ ಅಕ್ರಮವಾಗಿ ಬೇಲಿ ಹಾಕುತ್ತಾ ಒತ್ತುವರಿಗೆ ಮುಂದಾಗಿದ್ದರು. ಆಗೆಲ್ಲಾ ಗ್ರಾಮ ಪಂಚಾಯ್ತಿ ಪಿಡಿಓ ಮತ್ತು ಗ್ರಾಮಾಡಳಿತ ನಿರ್ಧಾಕ್ಷಿಣ್ಯವಾಗಿ ಬೇಲಿ ಕಿತ್ತು ಗ್ರಾಮದ ಆಸ್ತಿಯನ್ನು ಕಾಪಾಡಿಕೊಂಡು ಬಂದಿತ್ತು.
ಆದರೀಗ ಪಿಡಿಓ ವಿಶ್ವನಾಥ್ ಅದೇ ಗ್ರಾಮ ಠಾಣಾ ಜಾಗವನ್ನು ಅರ್ಚಕರೊಬ್ಬರಿಗೆ ೬೦ ಸಾವಿರ ರೂ.ಗಳ ಲಂಚ ಪಡೆದು 9/11 ದಾಖಲೆ ನೀಡಿದ್ದಾರೆಂದು ಸಾರ್ವಜನಿಕರು ಚರ್ಚೆ ಮಾಡತೊಡಗಿದ್ದಾರೆ. ಮೋಜಣಿ ಸ್ಕೆಚ್ ಇಲ್ಲದೇ ಈ ಜಾಗಕ್ಕೆ ಹೊಸ ಸ್ಕೆಚ್ ಸೃಷ್ಟಿಸಿ ದಾಖಲೆ ನೀಡಲಾಗಿದೆ. ಅಲ್ಲದೆ ಜಾಗದ ಸ್ವಾಧೀನಾನುಭವವೇ ಇಲ್ಲದೇ, ಗಾರಾ ಇಲ್ಲದೇ ಗ್ರಾಮ ಪಂಚಾಯ್ತಿಗೆ ಬರಬೇಕಾದ ಶುಲ್ಕ ವಗೈರೆ ಕಟ್ಟಿಸಿಕೊಳ್ಳದೇ ಲಂಚದಾಸೆಗೆ ಈ ಪಿಡಿಓ ಅರ್ಚಕರಿಗೆ 9/11 ದಾಖಲೆ ನೀಡಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಇನ್ನೂ ವಿಶೇಷವೆಂದರೆ, ಈ ರೀತಿ ಗ್ರಾಮ ಪಂಚಾಯ್ತಿಯಿಂದ 9/11 ದಾಖಲೆ ನೀಡಬೇಕಾದರೆ, ಈ ಸ್ವತ್ತನ್ನು ಯಾರಿಗೂ ಪರಭಾರೆ ಮಾಡಬಾರದು ಎಂಬ ನಿರ್ಬಂಧದ ಆಧಾರದ ಮೇಲೆ ನೀಡಬೇಕು. ಅರ್ಚಕರಿಗೆ ನೀಡಿರುವ ದಾಖಲೆಯಲ್ಲಿ ಅದ್ಯಾವ ನಿರ್ಬಂಧಗಳೂ ಇಲ್ಲದಿರುವುದು ಹಣ ಕೊಟ್ಟರೆ ಗ್ರಾಮ ಪಂಚಾಯ್ತಿಯ ಯಾವ ಆಸ್ತಿಯನ್ನು ಬೇಕಾದರೂ ಪಿಡಿಓ ವಿಶ್ವನಾಥ್ ಮಾರಿಕೊಳ್ಳುತ್ತಾರೆ ಎಂದು ಜನ ಮಾತಾಡಿಕೊಳ್ಳುವಂತಾಗಿದೆ.
ಗ್ರಾಮ ಠಾಣಾ ಅಥವಾ ಗ್ರಾಮ ಪಂಚಾಯ್ತಿಗೆ ಸೇರಿದ ಜಾಗವನ್ನು ಯಾರಿಗಾದರೂ ಮಂಜೂರು ಮಾಡಬೇಕಾದರೆ, ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಅನುಮೋದನೆ ಪಡೆಯಬೇಕು. ಗ್ರಾಮ ಸಭೆಗಳಲ್ಲಿ ಅದಕ್ಕೆ ಆಕ್ಷೇಪಣೆ ವ್ಯಕ್ತವಾಗಬಾರದು. ಆದರೆ, ವಿಶ್ವನಾಥ್ ಈ ರೀತಿ ಹಣದಾಸೆಗೆ ಅಧಿಕಾರವಿಲ್ಲದಿದ್ದರೂ ಬೇಕಾಬಿಟ್ಟಿ ದಾಖಲೆಗಳನ್ನು ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಇದೇ ಮೊದಲಲ್ಲ:
ಇದೇ ಪಿಡಿಓ ಹಿಂದೆ ಮಹಿಳೆಯೊಬ್ಬರ ಜಾಗವನ್ನು ಅವರು ಮೃತಪಟ್ಟಿದ್ದಾರೆ ಎಂದು ಷರಾ ಬರೆದು, ಆಸ್ತಿಗೆ ವಾರಸುದಾರರಲ್ಲದವರ ಹೆಸರಿಗೆ ದಾಖಲೆ ಬರೆದುಕೊಟ್ಟಿದ್ದರು. ಆ ಮಹಿಳೆಯ ಮಗ ಶೇಖರ್ ಎಂಬುವವರು ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಸಿಇಓ, ಎಸ್ಪಿಯವರಿಗೆ ದೂರು ಸಹ ನೀಡಿದ್ದರು. ಆದರೆ, ಈ ವರೆಗೂ ಸಂಬಂಧಿಸಿದವರ‍್ಯಾರೂ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕೋಟಿ ಕುಳ ಈ ಪಿಡಿಒ:
ವಿಶ್ವನಾಥ್ ಪಿಡಿಓ ಹುದ್ದೆಯಲ್ಲಿದ್ದು ಗ್ರಾಮ ಪಂಚಾಯ್ತಿ ಅಭಿವೃದ್ಧಿಗೆ ಶ್ರಮಿಸಿದ್ದಕ್ಕಿಂತ ಸ್ವಂತ ಆಸ್ತಿ ಜಾಸ್ತಿ ಮಾಡಿಕೊಳ್ಳಲು ಶ್ರಮಿಸಿದ್ದೇ ಹೆಚ್ಚು. ಹಾಗಾಗಿ ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಪೆರ್ಡೂರಿನಲ್ಲೊಂದು ಭವ್ಯವಾದ ಮನೆ ಕಟ್ಟಿಸಿಕೊಂಡಿದ್ದು, ವಿಟ್ಲದಲ್ಲಿ ದೊಡ್ಡ ನಿವೇಶನವನ್ನೂ ಖರೀದಿಸಿದ್ದಾನಂತೆ!
ಪಿಡಿಓ ವಿಶ್ವನಾಥನ ಅಕ್ರಮ ಅನ್ಯಾಯಗಳನ್ನು ಪ್ರಶ್ನಿಸಿದವರಿಗೆ ನಾನು ದಲಿತ, ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎಂದು ದಬಾಯಿಸಿ ಬಾಯಿ ಮುಚ್ಚಿಸುತ್ತಾ ಅಕ್ರಮ ಅವ್ಯವಹಾರಗಳನ್ನು ಮುಂದುವರೆಸಿದ್ದಾನೆ. ಇವರ ವಿರುದ್ಧ ಸ್ಥಳೀಯ ಶಾಸಕರು ರಾಜ್ಯದ ಗೃಹ ಸಚಿವರು ಆದ ಆರಗ ಜ್ಞಾನೇಂದ್ರ ಅವರ ಬಳಿ ದೂರು ಹೋಗಿದ್ದರೂ ಅದಕ್ಕೂ ಕೇರ್ ಮಾಡದೇ ತನ್ನ ಅಕ್ರಮಗಳನ್ನು ಮುಂದುವರೆಸಿದ್ದಾನೆ.
ಮೂಡುಗೊಪ್ಪ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಓ ಆದಾಗಿನಿಂದಲೂ ಇಂತಹದ್ದೇ ಅಕ್ರಮಗಳನ್ನು ಎಸಗುತ್ತಾ ಹಣ ಮಾಡುತ್ತಿರುವ ಪಿಡಿಓ ವಿಶ್ವನಾಥ್ ಆಟಾಟೋಪದಿಂದ ಜನ ರೋಸಿ ಹೋಗಿದ್ದಾರೆ. ಕೂಡಲೇ ಇವನ ವಿರುದ್ಧ ತನಿಖೆ ನಡೆಸಬೇಕು. ಇವನ ಹಣದಾಸೆಯಿಂದ ಯಾರದ್ದೋ ಆಸ್ತಿ ಇನ್ಯಾರದ್ದೋ ಪಾಲಾಗುತ್ತಿದ್ದು, ಜಿಲ್ಲಾಡಳಿತ, ಶಾಸಕರು, ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.