w
Headlines
Home » ರಿಪ್ಪನ್ ಪೇಟೆ ಪಂಚಾಯತ್ ದಿವಸ್ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಹರತಾಳು ಹಾಲಪ್ಪ : ಗೊಂದಲಗಳ ನಡುವೆ ನಡೆದ ಕಾರ್ಯಕ್ರಮ

ರಿಪ್ಪನ್ ಪೇಟೆ ಪಂಚಾಯತ್ ದಿವಸ್ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಹರತಾಳು ಹಾಲಪ್ಪ : ಗೊಂದಲಗಳ ನಡುವೆ ನಡೆದ ಕಾರ್ಯಕ್ರಮ

ರಿಪ್ಪನ್‌ಪೇಟೆ: ಜನರು ತಮ್ಮ ಕೆಲಸಕಾರ್ಯಗಳಿಗಾಗಿ ಕಛೇರಿಗಳಿಗೆ ಬರುವ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ಅಸಡ್ಡೆ ತೋರಬಾರದು. ಜನರೇ ಇಲ್ಲದಿದ್ದರೆ ಜನಪ್ರತಿನಿಧಿಗಳ ಅಸ್ಥಿತ್ವವೇ ಇರುತ್ತಿರಲಿಲ್ಲವೆಂಬ ಸತ್ಯ ಮನದಲ್ಲಿಟ್ಟುಕೊಳ್ಳಬೇಕೆಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.


ಪಟ್ಟಣದ ಗ್ರಾ.ಪಂ. ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಪಂಚಾಯತ್ ರಾಜ್ ದಿವಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಮ ಪಂಚಾಯತಿಗಳು ಸ್ಥಳೀಯ ಸರಕಾರವಾಗಿದೆ. ಜನರು ಕೆಲಸವಿಲ್ಲದೆ ಕಛೇರಿಗೆ ಬರುವುದಿಲ್ಲ. ಸುಮ್ಮನೆ ಬರಲು ಸರ್ಕಾರಿ ಕಛೇರಿಗಳು ಅವರ ಮಾವನ ಮನೆಯೂ ಅಲ್ಲ, ಅತ್ತೆ ಮನೆಯೂ ಅಲ್ಲ ಕೆಲಸವಿದ್ದಾಗ ಮಾತ್ರ ಬರುತ್ತಾರೆ. ಜನಪ್ರತಿ ನಿಧಿಗಳಾದವರು ನಿಖರವಾದ ಮಾಹಿತಿಯನ್ನು ನೀಡಬೇಕು. ಏನಾದರೂ ಕೊಡುತ್ತಾರೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡು ಜನತೆಗೆ ವಿನಾಕಾರಣ ಅನಗತ್ಯವಾಗಿ ಅಲೆಸಬಾರದು. ಉದ್ದಿಮೆ ಮತ್ತು ಅಂಗಡಿಗಳನ್ನು ತೆರೆದಾಕ್ಷಣ ಅಭಿವೃದ್ಧಿ ಹೊಂದುವುದಿಲ್ಲ. ಪೂರಕ ಖರೀದಿದಾರರು ಬರಬೇಕಾಗುತ್ತದೆ. ವ್ಯಾಪಾರಸ್ಥರಿಗೆ ಗ್ರಾಹಕರೇ ದೇವರುಅಂತೆಯೇ ಜನಪ್ರತಿನಿಧಿಗಳಿಗೆ ಜನರೇ ದೇವರು. ಸಾರ್ವಜನಿಕ ಕ್ಷೇತ್ರದಲ್ಲಿ ನಿಷ್ಠೆ, ಪ್ರಾಮಾಣಿಕತೆ ಸಂಯಮ ಇಟ್ಟುಕೊಂಡು ಕೆಲಸ ನಿರ್ವಹಿಸಿದಲ್ಲಿ ಸರ್ಕಾರಗಳ ಉದ್ದೇಶಗಳು ಸಫಲಗೊಳ್ಳುತ್ತದೆ ಎಂದರು.ಜಮ್ಮು-ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡ ಪಂಚಾಯತ್ ರಾಜ್ ದಿವಸ್ ಸಂದೇಶಗಳನ್ನು ದೂರದರ್ಶನದಲ್ಲಿ ವೀಕ್ಷಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷರಾದ ಮಂಜುಳಾ ಕೆ ರಾವ್ ವಹಿಸಿದ್ದರು. 


ಈ ಸಂಧರ್ಭದಲ್ಲಿ  ಗ್ರಾಪಂ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸುಧೀಂದ್ರ ಪೂಜಾರಿ, ಡಿ.ಈ.ಮಧುಸೂದನ್, ದೀಪಾ, ಅಶ್ವಿನಿ, ವೇದಾವತಿ, ವನಮಾಲ, ದಾನಮ್ಮ, ನಿರೂಪ್, ಗಣಪತಿ, ಜಿ.ಡಿ.ಮಲ್ಲಿಕಾರ್ಜುನ, ಆರ್.ಟಿ.ಗೋಪಾಲ್, ಆಸಿಫ್, ಪ್ರಕಾಶ್ ಪಾಲೇಕರ್, ಎಂ.ಬಿ.ಮಂಜುನಾಥ, ಮೆಣಸೆ ಆನಂದ, ತಾ.ಪಂ.ಇಓ ಪ್ರವೀಣ್, ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಎಂ.ನಾಗರಾಜ್, ಕೃಷಿ ಸಹಾಯಕ ನಿರ್ದೇಶಕರು ಜಿ.ಪಂ.ಸ.ಕಾ.ಪಾ. ಅಭಿಯಂತರರು, ಬ್ಯಾಂಕ್ ಅಧಿಕಾರಿಗಳು ಮತ್ತು ಬಿಸಿಎಂ ಇಲಾಖೆಯ ಮೇಲ್ವಿಚಾರಕಿ ಸುಮಿತ್ರಬಾಯಿ,ಆಶಾ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ಗೊಂದಲಗಳ ನಡುವೆ ನಡೆದ ಕಾರ್ಯಕ್ರಮ: 


ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಗ್ರಾಮಾಡಳಿತವು ಗ್ರಾ.ಪಂ.ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬೆಳಿಗ್ಗೆ ೧೦.೩೦ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಗಾಗಿ ತಯಾರಿ ನಡೆಸಲಾಗಿತ್ತು. ಆದರೆ ಶಾಸಕ ಹಾಲಪ್ಪನವರು ಸಭೆಗೆ ಆಗಮಿಸುವ ಮಾಹಿತಿಯಿಂದ ಅಧಿಕಾರಿಗಳು ಶಾಸಕರಿಂದ ಉದ್ಘಾಟನೆ ದೀಪ ಬೆಳಗಿಸಲು ಯೋಜಿಸಿದ್ದರು. ಶಾಸಕರು ಸಕಾಲಕ್ಕೆ ಬಾರದಿದ್ದ ಕಾರಣ ಸಾರ್ವಜನಿಕರಿಗೆ ಅನೌಪಚಾರಿಕವಾಗಿ ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ತಿಳಿಸಲಾಯಿತು.

 ಅದೇ ಸಂದರ್ಭದಲ್ಲಿ ಮುಖಂಡರಾದ ಆರ್.ಎನ್. ಮಂಜುನಾಥ, ಟಿ.ಅರ್. ಕೃಷ್ಣಪ್ಪ, ತರಕಾರಿ ಯೋಗೇಂದ್ರಪ್ಪಗೌಡ ಕಾರ್ಯಕ್ರಮದ ಔಚಿತ್ಯವನ್ನು ಪ್ರಶ್ನಿಸಿ ಸ್ವಹಿತಾಸಕ್ತಿಯ ಕೆರೆ ಅಭಿವೃದ್ಧಿ ಸಮಿತಿ ಆಯ್ಕೆ ವಿರೋಧಿಸಿ, ಪೊಲೀಸ್ ವಸತಿ ಗೃಹದ ರಸ್ತೆ ದುರಸ್ಥಿ ಮತ್ತು ಅಕ್ರಮದಲ್ಲಿ ಭಾಗಿಯಾದ ಪಡಿತರ ವಿತರಣ ಕೇಂದ್ರ ರದ್ದುಗೊಳಿಸುವಂತೆ ಆಗ್ರಹಸಿದರು.

ಈ ಸಂದರ್ಭದಲ್ಲಿ ಆಗಮಿಸಿದ ಶಾಸಕ ಹರತಾಳು ಹಾಲಪ್ಪನವರು ಸಭಿಕರೊಂದಿಗೆ ಕೆಲಕಾಲ ಕುಳಿತು ಪ್ರಧಾನಮಂತ್ರಿ ಕಾರ್ಯಕ್ರಮ ವೀಕ್ಷಿಸಿದ ನಂತರ ಬೇರೊಂದು ಕಾರ್ಯಕ್ರಮಕ್ಕೆ ತೆರಳಿದರು.

ಈ ಸಂದರ್ಭವನ್ನು ಬಳಸಿಕೊಂಡ ಕಾಂಗ್ರೇಸ್ ಬೆಂಬಲಿತ ಗ್ರಾ.ಪಂ.ಸದಸ್ಯರು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಆಕ್ರೋಶಗೊಂಡು ಸಭೆ ಬಹಿಷ್ಕರಿಸಿ ಹೊರನೆಡೆದರು. ಕೆಲ ಸಮಯದ ನಂತರ ಮತ್ತೆ ಬಂದ ಶಾಸಕರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಂತರ ಸಭೆ ಮುಕ್ತಾಯಗೊಳಿಸಲಾಯಿತು. ಬೆಳಿಗ್ಗೆ 10.30 ಕ್ಕೆ ಉದ್ಘಾಟನೆಗೊಂಡು ನಡೆಯಬೇಕಿದ್ದ ಕಾರ್ಯಕ್ರಮ ಕೆಲವರ ಸ್ವ್ವಹಿತಾಸಕ್ತಿಯಿಂದ ಮಧ್ಯಾಹ್ನ 1.45 ಕ್ಕೆ ಉದ್ಘಾಟನೆಗೊಂಡು ಸಭೆ ಮುಗಿಸಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.