ಜಾನಪದ ಕಲೆಯನ್ನು ಶಾಶ್ವತವಾಗಿ ಉಳಿಸಬೇಕಿದೆ: ಕಾಗೋಡು ತಿಮ್ಮಪ್ಪ

ರಿಪ್ಪನ್‌ಪೇಟೆ: ನಮ್ಮ ಪೂರ್ವಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಜಾನಪದ ಕಲೆ, ಸಾಹಿತ್ಯ ಪ್ರಕಾರಗಳು ಸರ್ವಕಾಲಕ್ಕೂ ಜನಮಾನಸದಲ್ಲಿ ಶಾಶ್ವತವಾಗಿ ಉಳಿಸುವ ಜವಾಬ್ದಾರಿಯನ್ನು ಇಂದಿನ ಯುವ ಪೀಳಿಗೆ ನಿರ್ವಹಿಸಬೇಕಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಕೆಂಚನಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾದಾಪುರ ಗ್ರಾಮದಲ್ಲಿ ಶ್ರೀಶನಿಪರಮೇಶ್ವರ ಯುವಕ ಸಂಘ, ಜಾನಪದ ಕಲಾ ಹಾಗೂ ಸಾಹಿತ್ಯ ವೇದಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಪುನಿತ್ ರಾಜ್‌ಕುಮಾರ್ ಸ್ಮರಣಾರ್ಥ ಸೋಮವಾರ ಸಂಜೆ ಆಯೋಜಿಸಲಾಗಿದ್ದ  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮತ್ತು ಶಿಕ್ಷಕ ರೇವಣ್ಣ ಜಾನಪದ ರಚಿಸಿದ ‘ನನ್ನೊಳಗೆ’ ಕವನ ಸಂಕಲನ ಬಿಡುಗಡೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ ಇಂದಿನ ಆಧುನಿಕ ಜೀವನ ಶೈಲಿಯಿಂದ ಪರಂಪರಾಗತ ಕಲಾಚರಣೆಗಳು ನೇಪತ್ಯೆಕ್ಕೆ ಸರಿಯುವಂತಾಗಿದೆ. ಇಂತಹ ಸಂದರ್ಭದಲ್ಲಿಯೂ ಮಾದಾಪುರ ಗ್ರಾಮದ ಮಣ್ಣು ವಿಶೇಷವಾದ ಅಂತಸತ್ವವನ್ನು ಹೊಂದಿದೆ. ಆದ್ದರಿಂದಲೇ ಇಲ್ಲಿ ಅನೇಕ ರೀತಿಯ ಜಾನಪದ ಕಲೆಗಳು ಇನ್ನೂ ಅಸ್ಥಿತ್ವದಲ್ಲಿದೆ. ಡೊಳ್ಳು ಕುಣಿತ, ಭಜನೆ, ನಾಟಕ, ಜಾನಪದ ಸಂಗೀತ ಮುಂತಾದ ಕಲೆಗಳಲ್ಲಿ ಇಲ್ಲಿನ ಯುವಕ ಯುವತಿಯರು ಸಾಧನೆ ಗೈದಿದ್ದಾರೆ. ರಾಜ್ಯ, ರಾಷ್ಟ, ಅಂತರಾಷ್ಟ ಮಟ್ಟದಲ್ಲಿಯೂ ಪ್ರಖ್ಯಾತಿಯನ್ನು ಪಡೆದಿದ್ದಾರೆ. ನಮ್ಮ ಮಣ್ಣಿನ ಕಲೆಯನ್ನು ಉಳಿಸುವಲ್ಲಿ ಶ್ರಮಿಸುತ್ತಿರುವ ಯುವಕರ ಪರಿಶ್ರಮ ಅಪಾರಾವಾಗಿದ್ದು ಇವರ ಜಾನಪದ ಕಲಾಪ್ರೌಢಿಮೆ ವಿಶ್ವಮಟ್ಟದಲ್ಲಿ ಪಸರಿಸಲಿ ಎಂದು ಶುಭಹಾರೈಸಿದರು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ ಗ್ರಾಮೀಣ ಕಲೆಗಳನ್ನು ಉಳಿಸುವ ಅನಿವಾರ್ಯತೆ ಇದೆ. ಸರ್ಕಾರಗಳು ಈ ಬಗ್ಗೆ ಆಸಕ್ತಿ ವಹಿಸಿ ಪ್ರತಿ ಹೋಬಳಿ ಮಟ್ಟದಲ್ಲಿ ಜಾನಪದ ಕಲಾ ಪ್ರದರ್ಶನ ಮೇಳ  ಆಯೋಜನೆ ಮಾಡುವ ಮೂಲಕ ನಮ್ಮ ಮೂಲ ಸಂಸ್ಕೃತಿ ಉಳಿಸುವತ್ತ ಗಮನ ಹರಿಸಬೇಕೆಂದರು.

ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ, ಸಂಘಟನೆ, ಸಮಾಜಮುಖಿ ಕಾರ್ಯದಲ್ಲಿ ಸಾಧನೆಗೈದ ಅನೇಕ ಮಹನೀಯರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಯುವಕ ಸಂಘದ ಕಲಾವಿದರಿಂದ ಸಂಗ್ಯಾಬಾಳ್ಯ ನಾಟಕ ಅಭಿನಯಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹರೀಶ್ ಅಧ್ಯಕ್ಷತೆ ವಹಿಸಿದ್ದು, ಗ್ರಾ.ಪಂ. ಅಧ್ಯಕ್ಷ ಉಬೇದುಲ್ಲಾ ಷರೀಫ್ ಮಾಜಿ ಜಿ.ಪಂ. ಸದಸ್ಯರಾದ ಕಲಗೋಡು ರತ್ನಾಕರ, ಬಂಡಿ ರಾಮಚಂದ್ರ, ಶ್ವೇತಾ ಬಂಡಿ, ತಾ.ಪಂ. ಮಾಜಿ ಅಧ್ಯಕ್ಷರಾದ ವಿರೇಶ ಆಲುವಳ್ಳಿ, ಮಾಜಿ ಸದಸ್ಯ ಸರಸ್ವತಿ ಗಣಪತಿ, ಪಿಎಸ್‌ಐ ಶಿವಾನಂದ ಕೋಳಿ, ಡಿ.ಎಸ್.ಎಸ್.ನ ಗುರುಮೂರ್ತಿ, ಭದ್ರಾವತಿ ಬಿಇಓ ನಾಗೇಂದ್ರಪ್ಪ, ಭದ್ರಾವತಿ ಜಗದೀಶ್, ಶಿಕ್ಷಕರ ಸಂಘದ ಮಹಬಲೇಶ್ವರ ಹೆಗಡೆ, ಭದ್ರಾವತಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿದ್ಧಬಸಪ್ಪ, ಮಹಮ್ಮದ್ ಷರೀಫ್, ಬಿ.ಡಿ. ರವಿಕುಮಾರ್, ಮಂಜುನಾಥ ಬೇಣದ್, ರೇವಣ್ಣ, ಮಂಜುನಾಥ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *