ಗೃಹ ಸಚಿವ ಆರಗ ಜ್ಞಾನೇಂದ್ರ ರವರ ಕೈ ತಪ್ಪಬಹುದಾ ಸಚಿವ ಸ್ಥಾನ ??????:

ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತಲೆದಂಡವಾಗುವ ಸಾಧ್ಯತೆ ಕಾಣುತ್ತಿದೆ.

ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಹಿಜಾಬ್, ಹಲಾಲ್, ಮಸೀದಿಗಳಲ್ಲಿ ಧ್ವನಿವರ್ಧಕ ಒಂದಲ್ಲಾ ಒಂದು ಕೋಮು ವಿಚಾರಗಳು ಸರ್ಕಾರಕ್ಕೆ ತಲೆನೋವಾಗುತ್ತಿವೆ. ವಿರೋಧ ಪಕ್ಷಗಳು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಅಸಮರ್ಥರಾಗಿದ್ದಾರೆ. ಕೂಡಲೇ ರಾಜೀನಾಮೆ ನೀಡಬೇಕು ಎಂದು ನಿತ್ಯವೂ ಒತ್ತಾಯಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತಲೆದಂಡವಾಗುತ್ತದೆ ಎಂಬ ಸುದ್ದಿ ಬುಧವಾರ ಸಂಜೆಯಿಂದ ಹರಿದಾಡುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ರಾಜ್ಯ ಸಚಿವ ಸಂಪುಟದ ವಿಸ್ತರಣೆ ಮತ್ತು ಪುನಾರಚನೆಗೆ ಕೇಂದ್ರ ನಾಯಕರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಗೃಹ ಖಾತೆಯಿಂದ ಬಿಡುಗಡೆಗೊಳಿಸುವ ಬಗ್ಗೆ ಚರ್ಚೆಯಾಗುತ್ತಿದೆ ಎನ್ನಲಾಗಿದೆ.

ಆರಗ ಜ್ಞಾನೇಂದ್ರ ಅವರಿಂದ ಕಿತ್ತುಕೊಳ್ಳುವ ಗೃಹ ಖಾತೆಯನ್ನು ಮತ್ತೊಬ್ಬ ಕರಾವಳಿ ಭಾಗದ ಯುವ ಸಚಿವ ವಿ. ಸುನೀಲ್ ಕುಮಾರ್ ಅವರಿಗೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸುನೀಲ್ ಕುಮಾರ್ ಸದ್ಯ ಇಂಧನ ಸಚಿವರಾಗಿದ್ದು, ಮುಖ್ಯಮಂತ್ರಿ ಜೊತೆಯಲ್ಲಿಯೇ ದೆಹಲಿಗೆ ತೆರಳಿದ್ದಾರೆ.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಸಂಪುಟ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ವಿಜೇಯಂದ್ರ ಅವರಿಗೆ ಇಂಧನ ಖಾತೆ ನೀಡಬಹುದು ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *