ಶಿವಮೊಗ್ಗದಲ್ಲಿ ನಿನ್ನೆ ಸಂಜೆ ಪದ್ಮ ಚಲನಚಿತ್ರದ ಮಂದಿರದ ಬಳಿ ವಾಕಿಂಗ್ ಹೋಗಿದ್ದ ವೆಂಕಟೇಶ್ ಎಂಬುವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ಇಬ್ಬರನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದು ಓರ್ವನ ಭೇಟೆಗೆ ಬಲೆ ಬೀಸಿದ್ದಾರೆ.
ನಿನ್ನೆ ಸಂಜೆ 06-30 ಗಂಟೆಗೆ ತುಂಗಾನಗರ ಠಾಣಾ ವ್ಯಾಪ್ತಿಯ ಪದ್ಮಾ ಟಾಕೀಸ್ ಎದುರು ಗೋಪಾಳ ಶಿವಮೊಗ್ಗ ಟೌನ್ ನ ವಾಸಿ ವೆಂಕಟೇಶ್ ಎಂಬುವರು ತಮ್ಮ ನಾಯಿಯನ್ನು ಹಿಡಿದುಕೊಂಡು ವಾಕಿಂಗ್ ಗೆ ಹೋಗಿ ವಾಪಾಸ್ ಮನೆಗೆ ಹಿಂದಿರುಗುವಾಗ ವಿದ್ಯಾನಿಕೇತನ ಶಾಲೆಯ ಹತ್ತಿರ ಅವರಿಗೆ ಕಲ್ಲಿನಿಂದ ಹಲ್ಲೆ ಮಾಡಲಾಗಿತ್ತು.
ಈ ಬಗ್ಗೆ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 100/2022 ಕಲಂ 504, 324, 307 ಸಹಿತ 34 ಐಪಿಸಿ ಮತ್ತು ಕಲಂ 3 (2) (v) the sc & st Amendment Act 2015 ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣದ ತನಿಖೆಯಲ್ಲಿ ಆರೋಪಿಗಳಾದ 1] ರಂಗನಾಥ ಬಡಾವಣೆಯ ಸಲ್ಮಾನ್(20) 2) ಅಣ್ಣಾನಗರದ ಸೈಯದ್ ಸುಬಾನ್, (18 ವರ್ಷ) ಶಿವಮೊಗ್ಗ ಟೌನ್ ರವರುಗಳನ್ನು ವಶಕ್ಕೆ ಪಡೆದಿದ್ದು, ತುಂಗನಗರ ಠಾಣೆಯವರು ತನಿಖೆಯನ್ನು ಮುಂದುವರಿಸಿದ್ದಾರೆ.
ಘಟನೆ ವಿವರ
ತನಿಖೆಯ ವೇಳೆಗೆ ಆರೋಪಿ ಸಲ್ಮಾನ್, ಸೈಯ್ಯದ್ ಸುಬಾನ್ ಮತ್ತು ಅಸ್ಲಂ ರವರುಗಳು ಟಿಪ್ಪುನಗರದ ವೈನ್ ಶಾಪ್ ನಲ್ಲಿ ಕುಡಿದು, ವೈನ್ ಶಾಪ್ ರಸ್ತೆಯಲ್ಲಿ ಎದುರುಗಡೆ ಬಂದ ಪರಿಚಯದ ಫೋಟೋ ಕ್ಯಾಮೆರಾ ಬಾಡಿಗೆಗೆ ಕೊಡುತ್ತಿದ್ದ ಚಿನ್ನು ಎಂಬಾತನೊಂದಿಗೆ ಫೋಟೋ ಕ್ಯಾಮೆರಾವನ್ನು ಬಾಡಿಗೆಗೆ ಕೊಡುವ ಬಗ್ಗೆ ಜಗಳ ಮಾಡಿಕೊಂಡಿದ್ದಾರೆ.
ವೆಂಕಟೇಶ್ ವಿದ್ಯಾನಿಕೇತನ ಶಾಲೆಯ ಆವರಣದಿಂದ ನಾಯಿಯನ್ನು ಹಿಡಿದುಕೊಂಡು ಕೈ ನಲ್ಲಿ ಮೊಬೈಲ್ ಹಿಡಿದು ಹೊರಗೆ ಬಂದಾಗ ಯಾಕೋ ನನ್ನನ್ನು ನೋಡುತ್ತೀಯ, ಕೈ ನಲ್ಲಿ ಮೊಬೈಲ್ ಹಿಡಿದು ಕೊಂಡು ವೀಡಿಯೋ ಮಾಡುತ್ತೀಯಾ ಎಂದು ಸಲ್ಮಾನ್, ಸಯ್ಯದ್ ಸುಬಾನ್ ಮತ್ತು ಅಸ್ಲಾಂ ವೆಂಕಟೇಶ್ ಜೊತೆ ಮಾತಿಗೆ ಇಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ರಂಗನಾಥಾ ಬಡಾವಣೆಯ ಸಲ್ಮಾನ್ ಹಾಗೂ ಅಣ್ಣಾನಗರದ ಸೈಯದ್ ಸುಬಾನ್ ಎಂಬುವ ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಅಸ್ಲಾಂ ಎಂಬ ವ್ಯಕ್ತಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.