ರಿಪ್ಪನ್ ಪೇಟೆ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಅತ್ಯುತ್ತಮವಾಗಿದ್ದು, ಡಿಜಿಟಲ್ ಕಲಿಕೆ, ಕೌಶಲ್ಯಗಳ ಪೂರೈಕೆ ಮತ್ತು ನವೋದ್ಯಮಗಳನ್ನು ಕೈ ಬಲಪಡಿಸುವುದಕ್ಕೆ ಒತ್ತು ನೀಡಿದೆ ಎಂದು ರಿಪ್ಪನ್ ಪೇಟೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಹೇಳಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆ ಹಾಗೂ ಇನ್ನಿತರ ವಸತಿ ಯೋಜನೆಗಳಿಗೆ ಒತ್ತು ನೀಡುವುದರೊಂದಿಗೆ, ಕೇಂದ್ರ ಸರ್ಕಾರದ ದೂರದೃಷ್ಟಿಯ ಈ ಬಜೆಟ್ ರಾಜ್ಯದ ‘ಸರ್ವರಿಗೂ ಸೂರು’ ಒದಗಿಸುವಲ್ಲಿ ಸ್ಫೂರ್ತಿ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಗ್ರಾಮೀಣಾಭಿವೃದ್ಧಿ, ನದಿಗಳ ಜೋಡಣೆ, ಮನೆ ಮನೆಗೂ ಶುದ್ಧ ಕುಡಿಯುವ ನೀರು, ಪ್ರತಿ ಗ್ರಾಮಕ್ಕೂ 5ಜಿ ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಗೆ 20 ಸಾವಿರ ಕೋಟಿ ರೂಪಾಯಿಗಳು, ವಿಶ್ವದರ್ಜೆಯ ಡಿಜಿಟಲ್ ಪಾಠಶಾಲೆ, ದೇಶದ ನೂರು ಜಿಲ್ಲೆಗಳ ನಗರಗಳಿಗೆ ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ, ಬೆಂಗಳೂರು ಮೆಟ್ರೋ ರೈಲು ಮಾರ್ಗ ವಿಸ್ತರಣೆ, ಉತ್ಪಾದನಾ ಕ್ಷೇತ್ರಕ್ಕೆ ನೀಡಲಾಗಿರುವ ಆದ್ಯತೆ ಸೇರಿದಂತೆ ಎಲ್ಲಾ ವಲಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ದೇಶದ ಎಲ್ಲಾ ವರ್ಗದ ಜನರ ಸಮಗ್ರ ಅಭಿವೃದ್ಧಿಗೆ ಪೂರಕ ಕೊಡುಗೆ ಕೊಡಲಾಗಿದೆ ಎಂದು ಹೇಳಿದರು.