ರಿಪ್ಪನ್‍ಪೇಟೆ: ಹಳೆಯ ಕಾಲ ಹೋಗಿದೆ, ಮೊದಲಿನ ಸ್ಥಿತಿ ಈಗಿಲ್ಲ ಕಾಂಗ್ರೇಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಮುಖಂಡರುಗಳು ಪಕ್ಷದ ಇಚ್ಛಾನುಸಾರ ಸಂಘಟನೆ ಮಾಡಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಾಂಗ್ರೇಸ್ ಕಾರ್ಯಕರ್ತರಿಗೆ ತಾಕೀತು ಮಾಡಿದರು.
ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೇಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಮುಖಂಡರುಗಳು ಕನಿಷ್ಟ ಒಂದು ತಿಂಗಳುಗಳ ಕಾಲ ಪ್ರತಿ ಬೂತ್‍ಗೆ ಹೋಗಿ ಕ್ರಿಯಾಶೀಲ ಕನಿಷ್ಟ 5 ಜನ ಕಾರ್ಯಕರ್ತರನ್ನು ಗುರುತಿಸಿ ಅವರ ಮುಖಾಂತರ ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸಬೇಕು ಹಾಗೆಯೇ ನಮ್ಮ ಸರ್ಕಾರ ಮಾಡಿದ ಕೆಲಸ ಜನರ ಮನಸ್ಸಿನಲ್ಲಿ ಉಳಿದಿವೆ. ಇವುಗಳನ್ನು ಜನರಿಗೆ ನೆನಪಿಸುವ ಕಾರ್ಯ ಆಗಬೇಕು. ಸದಸ್ಯತ್ವ ಅಭಿಯಾನದಲ್ಲಿ ನಾನು ಹಾಗೂ ಗೋಪಾಲಕೃಷ್ಣರವರು ಸದಾ ನಿಮ್ಮ ಜೊತೆಗಿದ್ದು ವಾರಕ್ಕೊಮ್ಮೆ ಕೇಂದ್ರ ಸ್ಥಾನಗಳಿಗೆ ಭೇಟಿ ನೀಡುತ್ತೇವೆ. ಅಭಿಯಾನದ ಪ್ರಗತಿಯ ಬಗ್ಗೆ ಪರಾಮರ್ಶೆಮಾಡುತ್ತೇವೆ. ಒಟ್ಟಾರೆ ನೆಲಮಟ್ಟದಿಂದ ಪಕ್ಷಕಟ್ಟಬೇಕಾದ ಅನಿವಾರ್ಯತೆಯಿದ್ದು ಯಾರೂ ಸಹಿತ ನಿರ್ಲಕ್ಷಿಸಬಾರದು. ಪಕ್ಷ ಕಟ್ಟುವ ಕಾರ್ಯ ನಿಮ್ಮಕೈಲಿ ಮಾಡಲಾದರೆ ಮಾಡಿ ಇಲ್ಲವೆಂದರೆ ಬಿಟ್ಟುಬಿಡಿ. ನಮ್ಮ ನಿರೀಕ್ಷೆಯಲ್ಲಿ ನೀವು ಕೆಲಸ ಮಾಡದಿದ್ದರೆ ಬದಲಾವಣೆಯ ಕೆಲ ತೀರ್ಮಾನವನ್ನು ಮಾಡಬೇಕಾಗುತ್ತದೆ ಎಂದು ಮುಖಂಡರಿಗೆ ಎಚ್ಚರಿಕೆಯ ಸಂದೇಶ ನೀಡಿದರು.
ಸರ್ಕಾರದ ಜನವಿರೋಧಿ ನೀತಿಯ ಬಗ್ಗೆ ಜನರನ್ನು ಜಾಗ್ರತೆಗೊಳಿಸುವುದು ಹಾಗೂ ಸರ್ಕಾರದ ಕಣ್ಣು ತೆರೆಸುವ ಉದ್ದೇಶದಿಂದ ಗ್ರಾಮಾಂತರ ಪ್ರದೇಶಗಳಲ್ಲಿಯೂ ಹೋರಾಟವನ್ನು ಹಮ್ಮಿಕೊಳ್ಳಬೇಕು. ಸದಸ್ಯತ್ವ ಅಭಿಯಾನವನ್ನು ಬಳಸಿಕೊಂಡು ಪಕ್ಷವನ್ನು ಸದೃಢ ಗೊಳಿಸುವ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಬಲಿಷ್ಟವಾಗಿ ಪಕ್ಷವನ್ನು ಕಟ್ಟಬೇಕು ಎಂದು ಕಾರ್ಯಕರ್ತರಿಗೆ ಕರೆನೀಡಿದರು.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಜಿಲ್ಲೆಯಲ್ಲಿ ಹಾಗೂ ಸಾಗರ-ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕು ಎನ್ನುವ ಮೂಲಕ ಸಾಗರ ಕ್ಷೇತ್ರದ ಮುಂದಿನ ಚುನಾವಣೆಗೆ ಸಜ್ಜಾಗಿ ಎಂದು ಪರೋಕ್ಷವಾಗಿ ಕಾಗೋಡು ತಿಮ್ಮಪ್ಪ ಹೇಳಿದರು.
ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಜನಸಾಮಾನ್ಯರಿಗೆ ಮಾರಕವಾಗಿ ಪರಿಣಮಿಸಿದೆ. ಈ ಅವಕಾಶವನ್ನು ಬಳಸಿಕೊಂಡು ಕ್ಷೇತ್ರದಲ್ಲಿ ಬಿಜೆಪಿಗಿಂತ ಹೆಚ್ಚಿನ ಸದಸ್ಯತ್ವನ್ನು ಕಾಂಗ್ರೇಸ್ ಕಾರ್ಯಕರ್ತರು ಮಾಡಬೇಕು. ಬಿಜೆಪಿಯ ಎರಡನೇ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಯವರು ಇನ್ನೂ ಟೇಕ್‍ಅಪ್ ಆಗಿಲ್ಲ. ಅವರು ಯಡಿಯೂರಪ್ಪ ಮತ್ತು ಸಂಘಪರಿವಾರದೊಂದಿಗೆ ಬ್ಯಾಲನ್ಸ್ ರಾಜಕಾರಣ ಮಾಡುತ್ತಿದ್ದಾರೆ. ಹಾಗಾಗಿ ರಾಜ್ಯಕ್ಕೆ ಶೀಘ್ರವೇ ಮೂರನೇ ಮುಖ್ಯಮಂತ್ರಿ ಬರಬಹುದು. ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಹಾಗೂ ನೇತಾರರಾದ ಕಾಗೋಡು ತಿಮ್ಮಪ್ಪನವರು ಮಾಡಿದ ಜನಪರ ಕಾರ್ಯಗಳು ಎಲ್ಲೆಲ್ಲಿಯೂ ಕಾಣುತ್ತಿರುತ್ತವೆ. ರೈತರ, ದೀನದಲಿತ, ಕೃಷಿಕಾರ್ಮಿಕ ಪರ ಇವರ ಹೋರಾಟ ನಿರಂತರವಾಗಿದ್ದು, ಸಂಕಷ್ಟದ ಜನರಿಗೆ ಭದ್ರತೆ ನೀಡುವ ಯೋಜನೆ ರೂಪಿಸಿದ್ದಾರೆ. ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಯಾವುದೇ ಹೋರಾಟವು ಇಲ್ಲದೆ ಜೈಲಿಗೆ ಹೋಗಿಬಂದವರನ್ನು ಇಲ್ಲಿ ಗೆಲ್ಲಿಸಿದ್ದಾರೆ. ಇವರ ಯೋಗ್ಯತೆಗೆ ರೈತರಿಗೆ ಇನ್ನೂ ಹಕ್ಕುಪತ್ರ ನೀಡಲಾಗುತ್ತಿಲ್ಲ. ಇದರ ಪರಿಣಾಮ ಜನರಿಗೀಗಾ ಅರ್ಥವಾಗುತ್ತಿದ್ದು, ಸದಸ್ಯತ್ವ ಹೆಚ್ಚಿಸುವ ಮೂಲಕ ಪಕ್ಷದ ಸಂಘಟನೆ ಗಟ್ಟಿಗೊಳಿಸಿದರೆ ನಮ್ಮ ಮುಂದೆ ಯಾವ ಶಕ್ತಿಯೂ ಉಳಿಯುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಜಿ. ನಾಗರಾಜ್,ರಿಪ್ಪನ್ ಪೇಟೆ ಘಟಕದ ಅಧ್ಯಕ್ಷರಾದ ಆಸೀಫ಼್ ಭಾಷಾಸಾಬ್, ಮಾಜಿ ಜಿ.ಪಂ. ಸದಸ್ಯರಾದ ಕಲಗೋಡು ರತ್ನಾಕರ, ಬಂಡಿರಾಮಚಂದ್ರ, ಗ್ರಾ.ಪಂ.ಅಧ್ಯಕ್ಷರಾದ ಉಮಾಕರ, ಉಬೇದುಲ್ಲಾ ಷರೀಫ್, ಕಲ್ಲಿ ಯೋಗೇಂದ್ರ, ಮುಖಂಡರಾದ ಅಮೀರ್ ಹಂಜ,ಜಯಶೀಲಪ್ಪಗೌಡ, ಈಶ್ವರಪ್ಪಗೌಡ, ಧನಲಕ್ಷ್ಮೀ, ಸಾಕಮ್ಮ, ಮಧುಸೂದನ, ಎನ್. ಚಂದ್ರೇಶ,ಫ಼್ಯಾನ್ಸಿ ರಮೇಶ್, ಉಲ್ಲಾಸ್,ಮಳವಳ್ಳಿ ಮಂಜುನಾಥ್ ಹಾಗೂ ಇನ್ನಿತರರಿದ್ದರು.