ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್(86) ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಫೆಬ್ರವರಿ 9 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ.
ರಾಜೇಶ್ ಅವರು ಏಪ್ರಿಲ್ 15, 1935 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಪಿಡಬ್ಲ್ಯೂಡಿ ಇಲಾಖೆಯಲ್ಲಿ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಹೈಸ್ಕೂಲಿನ ದಿನಗಳಿಂದಲೇ ಅವರಿಗೆ ರಂಗಭೂಮಿಯ ಸೆಳೆತ ಅಪಾರವಾಗಿತ್ತು. ಅಂದಿನ ರಂಗಭೂಮಿ ಕಲಾವಿದರಾದ ತ್ಯಾಗರಾಜ ಭಾಗವತರ್, ಟಿ. ಆರ್. ಮಹಾಲಿಂಗಂ ಅಂತಹ ಕಲಾವಿದರ ಬಗ್ಗೆ ಅಭಿಮಾನ ಹೊಂದಿದ್ದ ಅವರು ಮನೆಯವರಿಗೆ ತಿಳಿಯದಂತೆ ನಾಟಕ ಮಂಡಳಿಯಲ್ಲಿ ಪಾತ್ರವಹಿಸತೊಡಗಿದರು.
ಮುಂದೆ ತಮ್ಮದೇ ಆದ ‘ಶಕ್ತಿ ನಾಟಕ ಮಂಡಳಿ’ಯನ್ನು ಸ್ಥಾಪಿಸಿದ ರಾಜೇಶ್ ನಾಡಿನೆಲ್ಲೆಡೆ ಪ್ರಸಿದ್ಧ ನಾಟಕಗಳನ್ನಾಡಿದರು.
ನಾಟಕಗಳಲ್ಲಿನ ಜನಪ್ರಿಯತೆ ರಾಜೇಶರನ್ನು ಚಿತ್ರರಂಗಕ್ಕೂ ಕರೆದು ತಂದಿತು. ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು ‘ವೀರ ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
ಪ್ರಸಿದ್ಧ ನಿರ್ಮಾಪಕ ಬಿ. ಎಸ್. ನಾರಾಯಣ್ ನಿರ್ಮಿಸಿ, ಸಿ.ವಿ. ಶಿವಶಂಕರ್ ಅವರು ನಿರ್ದೇಶಿಸಿದ ‘ನಮ್ಮ ಊರು’ ಚಿತ್ರ ಭರ್ಜರಿ ಯಶಸ್ಸು ಕಂಡಿದ್ದಲ್ಲದೆ ರಾಜೇಶ್ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದಿತು. ಹೀಗೆ ಸಾಗಿದ ತಮ್ಮ ಚಿತ್ರರಂಗದ ಬದುಕಿನಲ್ಲಿ ರಾಜೇಶ್ ಅವರು 150ಕ್ಕೂ ಹೆಚ್ಚು ನಾಯಕ ಪ್ರದಾನ ಪಾತ್ರಗಳು ಮತ್ತು ವೈವಿಧ್ಯಮಯ ಪೋಷಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
‘ನಮ್ಮ ಊರು’, ‘ಗಂಗೆ ಗೌರಿ’, ‘ಸತೀ ಸುಕನ್ಯ’, ಬೆಳುವಲದ ಮಡಿಲಲ್ಲಿ’, ‘ಕಪ್ಪು ಬಿಳುಪು’, ‘ಬೃಂದಾವನ’, ‘ಬೋರೆ ಗೌಡ ಬೆಂಗಳೂರಿಗೆ ಬಂದ’, ‘ಮರೆಯದ ದೀಪಾವಳಿ’, ‘ಪ್ರತಿಧ್ವನಿ’, ‘ಕಾವೇರಿ’, ‘ದೇವರ ಗುಡಿ’, ‘ಬದುಕು ಬಂಗಾರವಾಯ್ತು’, ‘ಸೊಸೆ ತಂದ ಸೌಭಾಗ್ಯ’, ‘ಮುಗಿಯದ ಕಥೆ’, ‘ಬಿಡುಗಡೆ’, ‘ದೇವರದುಡ್ಡು’, ‘ಕಲಿಯುಗ’, ‘ಪಿತಾಮಹ’ ಮುಂತಾದ ಚಿತ್ರಗಳಲ್ಲಿ ರಾಜೇಶರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.