ಸಾಗರ : ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಸೇವೆ ದೊರಕದೇ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ತುಮರಿಯಲ್ಲಿ ನಡೆದಿದೆ.
ತುಮರಿ ಸಮೀಪದ ಚದರವಳ್ಳಿ ಗ್ರಾಮದ ಚೈತ್ರಾ ಎನ್ನುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಅ್ಯಂಬುಲೆನ್ಸ್ ಇಲ್ಲದೇ ಖಾಸಗಿ ವಾಹನದಲ್ಲಿ ಗರ್ಭಿಣಿಯನ್ನು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ.
ಈ ವೇಳೆ ಮಹಿಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಡವಾಗಿ ಬಂದಿದ್ದರಿಂದ ತಾಯಿ- ಹಾಗೂ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಹೆಚ್ಚಿನ ಚಿಕಿತ್ಸೆಗೆ ಸಾಗರ ತಾಲೂಕು ಆಸ್ಪತ್ರೆಗೆ ತೆರಳುವಂತೆ ವೈದ್ಯರ ಸಲಹ ನೀಡಿದ್ದು, ಖಾಸಗಿ ವಾಹನದಲ್ಲಿ ಸಾಗರಕ್ಕೆ ತೆರಳುವ ಮಾರ್ಗ ಮಧ್ಯೆಯೇ ನವಜಾತ ಶಿಶು ಸಾವನ್ನಪ್ಪಿದೆ.
ತಾಯಿ ಮಗುವಿನ ಜೀವ ಉಳಿಸಲು ಸ್ಥಳೀಯರು ಕೂಡ ಹರಸಾಹಸಪಟ್ಟಿದ್ದು, ಸಾಗರ ಆಸ್ಪತ್ರೆಗೆ ತೆರಳಲು ಸೂಕ್ತ ರಸ್ತೆ ಮಾರ್ಗ ಇಲ್ಲದ ಕಾರಣ ಲಾಂಚ್ ಸಿಬ್ಬಂದಿ ತಡರಾತ್ರಿ ಕೂಡ ಸೇವೆ ಒದಗಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಖಾಸಗಿ ವಾಹನದಲ್ಲಿ ಯಾವುದೇ ಸೌಲಭ್ಯ ಇಲ್ಲದೇ ಮಗು ಮೃತಪಟ್ಟಿದೆ.
ಸೂಕ್ತ ಆಂಬ್ಯುಲೆನ್ಸ್ ಸೇವೆ ಇಲ್ಲದೇ ಇರುವುದುದೇ ಈ ಮಗುವಿನ ಸಾವಿಗೆ ಕಾರಣ ಎಂದು ಕುಟುಂಬಸ್ಥರು, ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ತುಮರಿ ಭಾಗದಲ್ಲಿ ಹುಟ್ಟುವುದೇ ಶಾಪವಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂಬುಲೆನ್ಸ್ ದೊರೆಯದೇ ಮತ್ತೊಂದು ಜೀವ ಹೋಗುವ ಮುನ್ನ ಈ ಬಗ್ಗೆ ಶಾಸಕರು,ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.