ಸಾಗರದ ಹುಲಿದೇವರ‌ಬನದ ಎಂಪಿಎಂ ಅರಣ್ಯ ಪ್ರದೇಶದಲ್ಲೊಂದು ಹೃದಯ ವಿದ್ರಾವಕ ಘಟನೆ : ಆಟವಾಡುತ್ತಿದ್ದ ಬಾಲಕಿ ಸಾವು

ಸಾಗರ : ಇಂದು ಸಂಜೆ ನಡೆದ ಅವಘಡದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯೊಬ್ಬಳ ಮೇಲೆ ಮರದ ದಿಮ್ಮಿ ಹರಿದು ಸಾವನ್ನಪ್ಪಿರುವ ಘಟನೆ ಸಾಗರದ ಹುಲಿದೇವರ ಬನದಲ್ಲಿರುವ MPM ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಇಂದು ಸಂಜೆ ಸುಮಾರು 4-30ರ ಸಮಯದಲ್ಲಿ ಮರಗಳನ್ನ ಕಡಿದು ಒಂದರ ಮೇಲೊಂದು ಮರದ ದಿಮ್ಮಿಗಳನ್ನ ಸಿಪ್ಪೆ ಸುಲಿದು ಜೋಡಿಸಿ ಇಡಲಾಗಿತ್ತು. ಮರದ ದಿಮ್ಮಿಯ ಕೆಳಗೆ 6 ವರ್ಷದ ಶ್ರಾವಣಿ ಎಂಬ ಹೆಣ್ಣು ಮಗು ಆಡುತ್ತಿದ್ದ ವೇಳೆ ಜೋಡಿಸಿದ ಮರದ ದಿಮ್ಮಿ ಚದುರಿಹೋಗಿದ್ದು ಮಗುವಿನ ಮೇಲೆ ಹರಿದಿದೆ.
ತೀವ್ರವಾಗಿ ಗಾಯಗೊಂಡಿದ್ದ ಈ ಮಗುವನ್ನ ಸಾಗರದ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಗು ಕೊನೆ ಉಸಿರು ಎಳೆದಿದೆ. ಮಗುವನ್ನ ಶ್ರಾವಣಿ ಎಂದು ಗುರುತಿಸಲಾಗಿದೆ. ಧಾರವಾಡದ ಕಲಘಟಗಿಯಿಂದ ಕಳೆದ ಮೂರು ತಿಂಗಳ ಹಿಂದೆ ಮರಕಡಿಯುವ ಕೆಲಸಕ್ಕೆ ಬಂದ ವೇಳೆ ದಂಪತಿಗಳು ತಮ್ಮ ಮೂರನೇ ಮಗುವನ್ನ ಕಳೆದುಕೊಂಡಿದ್ದಾರೆ.

ಮೂರು ತಿಂಗಳ ಹಿಂದೆ ಈ MPM ಅರಣ್ಯ ಪ್ರದೇಶದ ಮರ ಕಡಿತಲೆಗೆ ಗುತ್ತಿಗೆ ಪಡೆದಿದ್ದ ಸಿದ್ದವೀರಪ್ಪನವರು 30-35 ಜನರನ್ನ ಕರೆಸಿಕೊಂಡಿದ್ದಾರೆ. ಇದರಲ್ಲಿ ರವಿ ಮತ್ತು ಮಂಜುಳಾ ಎಂಬುವರು ಕೆಲಸಕ್ಕೆ ಒಂದು ಗಂಡು ಒಂದು ಹೆಣ್ಣು ಮಗುವಿನೊಂದಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.
ಒಟ್ಟು ಮೂರು ಜನ ಮಕ್ಕಳಿರುವ ರವಿ ಎಂಬ ದಂಪತಿಯವರಿಗೆ ಒಬ್ಬ ಮಗ ಕಲಘಟಗಿಯಲ್ಲಿ ಶಾಲೆಗೆ ಹೋಗುತ್ತಿದ್ದಾನೆ. ಇನ್ನೊಬ್ಬ ಮಗ ಮತ್ತು ಶ್ರಾವಣಿಯೊಂದಿಗೆ ಬಂದಿದ್ದ ಇವರು ಇಂದು ನಡೆದ ವಿಧಿಯಾಟದಲ್ಲಿ ಆರು ವರ್ಷದ  ಶ್ರಾವಣಿಯನ್ನ ಕಳೆದುಕೊಂಡಿದ್ದಾರೆ.* ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದೆ.

Leave a Reply

Your email address will not be published. Required fields are marked *