ರಿಪ್ಪನ್‌ಪೇಟೆ : ಗ್ರಾಮ ಪಂಚಾಯ್ತಿ ಕುವೆಂಪು ಸಭಾಭವನದಲ್ಲಿ 22 ಜನ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರವನ್ನು ಶಾಸಕರಾದ ಹರತಾಳು ಹಾಲಪ್ಪ ರವರು ವಿತರಣೆ ಮಾಡಿದರು.
ನಂತರ ಮಾತನಾಡಿದ ಶಾಸಕರು ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಕೂಡಾ ಅರಣ್ಯ ಭೂ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಭೂ ಒಡೆತನದ ಹಕ್ಕು ಕಲ್ಪಸಲು ಕಾನೂನು ಅಡ್ಡಿಯಾಗುತ್ತಿದೆ ಇಲಾಖೆಯಲ್ಲಿ ಡೀಮ್ಡ್ ಫಾರೆಸ್ಟ್, ಸ್ಟೇಟ್ ಪಾರೆಸ್ಟ್, ಮೀಸಲು ಅರಣ್ಯ, ಅಭಯಾರಣ್ಯ ಹೀಗೆ ಹತ್ತು ಹಲವು ವಿಭಾಗಗಳಿಂದಾಗಿ ರೈತರಿಗೆ ಭೂ ಮಂಜೂರಾತಿ ಪತ್ರ ಕೊಡಿಸಲು ಶಾಸನ ಸಭೆಯಲ್ಲಿ ಮತ್ತು ಹೋರಾಟದ ಮೂಲಕ ಪ್ರಯತ್ನಿಸಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈಗಾಗಲೇ ರಾಜ್ಯದ ಗೃಹ ಸಚಿವರು ಮತ್ತು ನಾನು ಹಾಗೂ ಸ್ಪೀಕರ್ ಕಾಗೇರಿಯವರು ಸೇರಿದಂತೆ ಮಲೆನಾಡಿನ ಹಲವು ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ವಿಷಯ ಮಂಡಿಸಿ ಚರ್ಚಿಸಲಾಗಿದ್ದರೂ ಕಾರ್ಯಗತಗೊಂಡಿಲ್ಲ ಆದ್ದರಿಂದ ಸಂಸದರ ನೇತೃತ್ವದಲ್ಲಿ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಕಾನೂನು ಸರಳಗೊಳಿಸುವ ಬಗ್ಗೆ ವಿಶ್ವಾಸವಿದೆ ಎಂದರು.
ನಿತ್ಯ ಕಛೇರಿ ಕೆಲಸ ಕಾರ್ಯಗಳಿಗೆ ಬರುವ ದೂರದೂರುಗಳ ರೈತ ವಿದ್ಯಾರ್ಥಿ ಸಮೂಹ ನಾಗರೀಕರ ಕೆಲಸ ಕಾರ್ಯಗಳಿಗೆ ಹಣಕೊಡದಿದ್ದರೆ ಅಲೆದಾಡಿಸಲಾಗುತ್ತದೆಂಬ ಬಗ್ಗೆ ನನ್ನ ಗಮನಕ್ಕೆ ಬಂದಿದೆ ತಾವು ಎರಡು ಮೂರು ದಿನದಲ್ಲಿ ಜಿಲ್ಲಾ ಕೇಂದ್ರಕ್ಕೆ ಮೀಟಿಂಗ್, ಈಟಿಂಗ್‌ಗೆ ಹೋಗುವ ಮಾರ್ಗದ ರಿಪ್ಪನ್‌ಪೇಟೆ ನಾಡಕಛೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಅವರು ನಾನು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಹೇಳಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ತಹಶೀಲ್ದಾರ್ ರಾಜೀವ್, ತಾ.ಪಂ. ಇಓ ಪ್ರವೀಣ್, ಪಿಡಿಓ ಜಿ.ಚಂದ್ರಶೇಖರ್, ಗ್ರಾ.ಪಂ. ಸದಸ್ಯರಾದ ಸುಧೀಂದ್ರ ಪೂಜಾರಿ,ಸುಂದರೇಶ್ ಹಾಗೂ ಇನ್ನಿತರರು ಪಕ್ಷದ ಮುಖಂಡರು ಹಾಜರಿದ್ದರು.