ರಿಪ್ಪನ್ ಪೇಟೆ: ಮಾಜಿ ಸಭಾಪತಿ ಹಾಗೂ ಹಾಲಿ ಶಾಸಕ ರಮೇಶ್ ಕುಮಾರ್ ರವರ ಹೇಳಿಕೆಯನ್ನು ಖಂಡಿಸಿ ಹೊಸನಗರ ತಾಲೂಕ್ ಬಿಜೆಪಿ ಮಹಿಳಾ ಮೋರ್ಚಾ ಮತ್ತು ರಿಪ್ಪನ್ ಪೇಟೆಯ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಪಟ್ಟಣದ ವಿನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ನೇತೃತ್ವವಹಿಸಿ ಮಾತನಾಡಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನಿನ್ನೆ ಮಾಜಿ ಸ್ಪೀಕರ್ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ರವರು ಅತ್ಯಾಚಾರದ ಕುರಿತು ನೀಡಿದ ಹೇಳಿಕೆ ಮತ್ತು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯವಾಗಿದೆ. ಇದು ಮಹಿಳೆಯರ ಬಗ್ಗೆ ಅವರು ಹೊಂದಿರುವ ಮನಸ್ಥಿತಿಯನ್ನು ಬಿಂಬಿಸುತ್ತದೆ. ಈ ಹೇಳಿಕೆಯನ್ನು ಖಂಡಿಸದೆ ಮೌನವಹಿಸಿರುವುದು ಕಾಂಗ್ರೆಸ್‌ನ ಹೈಕಮಾಂಡ್ ನಿಲುವು ವಿಷಾದನೀಯ ಎಂದರು.
ಬಿಜೆಪಿ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಟಿ ಡಿ ಮೇಘರಾಜ್ ಮಾತನಾಡಿ ರಮೇಶ್ ಕುಮಾರ್ ಅವರ ಹೇಳಿಕೆ ನಾಚಿಕೆಗೇಡಿನ ವಿಷಯವಾಗಿದ್ದು, ಆ ಪಕ್ಷದ ನಾಯಕರು ಇಂಥವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಹೊಸನಗರ ತಾಲೂಕ್ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸರಸ್ವತಿ ಗಣಪತಿ ಮಾತನಾಡಿ ಇದು”ಅತ್ಯಂತ ದುಃಖಕರ, ದುರದೃಷ್ಟದ ಹೇಳಿಕೆಯಾಗಿದೆ. ದೇಶವು ಇನ್ನೂ ಸ್ತ್ರೀದ್ವೇಷ ಹೊಂದಿರುವ ಸಾರ್ವಜನಿಕ ಪ್ರತಿನಿಧಿಗಳನ್ನು ಹೊಂದಿದೆ. ಸದನದಲ್ಲಿ ಕುಳಿತು ಈ ರೀತಿ ಹೇಳಿಕೆ ನೀಡುವುದಾದರೆ ಅವರೊಂದಿಗಿರುವ ಮಹಿಳೆಯರೊಂದಿಗೆ ಯಾವ ರೀತಿ ಅವರು ವರ್ತಿಸುತ್ತಾರೆ ಎಂದು ಪ್ರಶ್ನಿಸಿದರು.
ರಿಪ್ಪನ್ ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಗೌರವ ಇದೆ. ಇದಕ್ಕೆ ಚ್ಯುತಿ ಎಂಬಂತೆ ಇವರ ಬೇಜವಾಬ್ದಾರಿ ಹೇಳಿಕೆ ನೋವಿನ ಸಂಗತಿಯಾಗಿದೆ. ಈ ರೀತಿ ಮಹಿಳೆಯರು ಮತ್ತು ಮಕ್ಕಳ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಸಮಾಜದ ಶಾಂತಿ ಕದಡಲು ಪ್ರಯತ್ನಿಸುವರ ಮೇಲೆ ಸರ್ಕಾರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಬಿಜೆಪಿಯ ಪ್ರಮುಖರಾದ ಆರ್ ಟಿ ಗೋಪಾಲ್,ಸುಧೀಂದ್ರ ಪೂಜಾರಿ ,ಸುಂದರೇಶ್,ಆರ್ ರಾಘವೇಂದ್ರ,ಮಂಜುಳಾ ಕೆ ರಾವ್,ಸುರೇಶ್ ಸಿಂಗ್, ನಾಗರತ್ನ ದೇವರಾಜ್,ಮಹಾಲಕ್ಷ್ಮಿ ಅಣ್ಣಪ್ಪ,ಲೀಲಾ ಶಂಕರ್,ಕಗ್ಗಲಿ ಲಿಂಗಪ್ಪ,ಹೊನ್ನಕೊಪ್ಪ ಪರಮೇಶ್, ರೇಖಾ ಶ್ರೀಧರ್ ಹಾಗೂ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.