ರಿಪ್ಪನ್‌ಪೇಟೆ: ಎಳ್ಳಮವಾಸ್ಯೆ ಪ್ರಯುಕ್ತ ಜ.2 ರಂದು ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯ ಐತಿಹಾಸಿಕ ಹಿನ್ನೆಲೆಯುಳ್ಳ ಪುರಾಣ ಪ್ರಸಿದ್ಧ ಅಗಸ್ತ್ಯ ಮಹರ್ಷಿಗಳ ಪುಣ್ಯಾಶ್ರಮವಾದ ಶರ್ಮೀಣ್ಯಾವತಿ ನದಿ ತೀರದಲ್ಲಿರುವ ಶ್ರೀ ಕ್ಷೇತ್ರ ರಾಮತೀರ್ಥದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ 40ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ 9ನೇ ವರ್ಷದ ವಾರ್ಷಿಕೋತ್ಸವ ಏರ್ಪಡಿಸಲಾಗಿದೆ ಎಂದು ಶ್ರೀ ರಾಮೇಶ್ವರ ದೇವಸ್ಥಾನದ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 8.00 ಗಂಟೆಯಿಂದ ಪ್ರಧಾನ ಪುರೋಹಿತರಾದ ಕೆಂಜಿಗಾಪುರದ ಶ್ರೀಧರ್ ಭಟ್, ಶ್ರೀ ಸತ್ಯನಾರಾಯಣ ವ್ರತದ ಪುರೋಹಿತರಾದ ಶ್ರೀಧರಮೂರ್ತಿ ಹಾಲಂದೂರು ಮತ್ತು ದೇವಸ್ಥಾನದ ನಿತ್ಯಪೂಜೆ ಅರ್ಚಕರಾದ ಎ.ವಿ. ಸುಬ್ರಹ್ಮಣ್ಯ ಭಟ್ ಹಿಂಡ್ಲೆಮನೆ ಇವರ ನೇತೃತ್ವದಲ್ಲಿ ಗಣಪತಿ ಪೂಜೆ, ಪುಣ್ಯಾಹ, ಕಲಾತತ್ವ ಹೋಮ, ಶರ್ಮೀಣ್ಯಾವತಿ ನದಿಯಲ್ಲಿ ಸಾಮೂಹಿಕ ತೀರ್ಥಸ್ನಾನ ಹಾಗೂ ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ನಡೆಯಲಿದ್ದು ಮಧ್ಯಾಹ್ನ ಭಕ್ತಾದಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು ಹಾಗೂ ಇದೇ ದಿನ ಸಂಜೆ 6:30 ಕ್ಕೆ ಹೊಳೆ ದೀಪೋತ್ಸವ ವಿಶೇಷ ಪೂಜೆ ನಡೆಯಲಿದ್ದು ನಂತರ ಭಕ್ತಾದಿಗಳಿಗೆ ಲಘು ಉಪಹಾರದ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಬೇಕಾಗುವ ಅಕ್ಕಿ, ತೆಂಗಿನಕಾಯಿ, ಬಾಳೆಹಣ್ಣು, ತರಕಾರಿ, ಬೆಲ್ಲ, ವೀಳ್ಯದೆಲೆ, ಅಡಿಕೆ ಇತ್ಯಾದಿ ವಸ್ತುಗಳನ್ನು ಹೊರೆಕಾಣಿಕೆಯಾಗಿ ಕೊಡಲು ಅವಕಾಶವಿದ್ದು, ಶ್ರೀ ರುದ್ರಾಭಿಷೇಕ ಮತ್ತು ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಮಾಡಿಸುವ ಭಕ್ತಾಧಿಗಳು 100 ರೂ.ಗಳನ್ನು ಸಮಿತಿಯವರಲ್ಲಿ ಪಾವತಿಸಿ ಹೆಸರು ನೋಂದಾಯಿಸಿ ರಶೀದಿಯನ್ನು ಪಡೆಯಲು ಅವರು ಈ ಮೂಲಕ ಕೋರಿದ್ದಾರೆ.
ವರದಿ: ಮಹೇಶ ಹಿಂಡ್ಲೆಮನೆ