ಶಿವಮೊಗ್ಗ : ಸಕ್ರೆಬೈಲು ಬಿಡಾರದ ಮರಿ ಆನೆಯೊಂದಕ್ಕೆ ನಟ ಪುನೀತ್ ರಾಜಕುಮಾರ್ ಅವರ ಹೆಸರು ಇಡಲಾಗಿದೆ. ಇವತ್ತು ವೀನಿಂಗ್ ಪ್ರಕ್ರಿಯೆ ವೇಳೆ ಮರಿ ಆನೆಗೆ ಪುನೀತ್ ಹೆಸರು ನಾಮಕರಣ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಕ್ರೆಬೈಲು ಬಿಡಾರದ ನೇತ್ರಾವತಿ ಅನೆಯ ಮರಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಡಲಾಗಿದೆ.
ಡಾಕ್ಯೂಮೆಂಟರಿ ಒಂದರ ಚಿತ್ರೀಕರಣಕ್ಕಾಗಿ ನಟ ಪುನೀತ್ ರಾಜಕುಮಾರ್ ಅವರು ಸಕ್ರೆಬೈಲು ಬಿಡಾರಕ್ಕೆ ಭೇಟಿ ನೀಡಿದ್ದರು. ಆಗ ನೇತ್ರಾವತಿಯ ಮರಿ ಜೊತೆಗೆ ನಟ ಪುನೀತ್ ಕೆಲವು ಹೊತ್ತು ಕಳೆದಿದ್ದರು. ಅದನ್ನು ಮುದ್ದಾಡಿದ್ದರು. ಹಾಗಾಗಿ ಅವರ ಹೆಸರನ್ನೆ ಆನೆಗೆ ಇಡಲಾಗಿದೆ.
‘ಆನೆಗೆ ನಟ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಡಲಾಗುತ್ತಿದೆ’ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಎಫ್ಒ ಐ.ಎಂ.ನಾಗರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವೀನಿಂಗ್ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸಕ್ರೆಬೈಲು ಬಿಡಾರಕ್ಕೆ ಇವತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು.
ನೇತ್ರಾವತಿ ಮತ್ತು ಅದರ ಮರಿ ಪುನೀತ್ ಇವತ್ತಿನಿಂದ ದೂರ ದೂರ ಉಳಿಯಬೇಕಿದೆ. ಈವರೆಗೂ ತಾಯಿ ಹಾಲು ಕುಡಿಯಲು ಮರಿ ಆನೆಗೆ ಅವಕಾಶವಿತ್ತು. ಆದರೆ ಇನ್ಮುಂದೆ ಮರಿ ಆನೆ ಪುನೀತ್, ಸ್ವತಂತ್ರವಾಗಿ ಬದುಕಬೇಕಿದೆ. ಹಾಗಾಗಿ ತಾಯಿ ಮತ್ತು ಮರಿಯನ್ನು ಬೇರ್ಪಡಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ವೀನಿಂಗ್ ಎಂದು ಕರೆಯಲಾಗುತ್ತದೆ.
ತಾಯಿ ಆನೆಯನ್ನು ಕಾಡಿನಲ್ಲಿ ಬಿಡಲಾಗುತ್ತದೆ. ಮರಿ ಆನೆಯನ್ನು ಬಿಡಾರದಲ್ಲಿ ಕಟ್ಟಲಾಗುತ್ತದೆ. ಆದರೆ ತಾಯಿ ಜೊತೆಗೆ ಬೆರೆಯಲು, ಹಾಲು ಕುಡಿಯುವಂತಿಲ್ಲ. ಬಿಡಾರದ ಉಳಿದ ಆನೆಗಳಿಗೆ ನೀಡುವ ಆಹಾರವನ್ನೇ ಮರಿ ಆನೆ ಪುನೀತ್’ಗೂ ನೀಡಲಾಗುತ್ತದೆ. ವೀನಿಂಗ್ ಪ್ರಕ್ರಿಯೆ ಇವತ್ತು ಆರಂಭವಾಗಿದ್ದು, ಹಂತ ಹಂತವಾಗಿ ಮರಿಯಾನೆಯನ್ನು ತರಬೇತುಗೊಳಿಸಲಾಗುತ್ತದೆ.