ಶಿವಮೊಗ್ಗ : ಇಲ್ಲಿನ ಜಿಲ್ಲಾ ಕಾರಾಗೃಹದ ಸಿಬ್ಬಂದಿಯೊಬ್ಬ ತಾನು ಸಾಯುವ ದೃಶ್ಯ ತನ್ನ ಮನೆಯವರು ನೋಡಬೇಕೆಂದು ವಿಡಿಯೋ ಕಾಲ್ ಮಾಡಿ, ಅವರ ಸಮ್ಮುಖದಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ.
ಕೇಂದ್ರ ಕಾರಾಗೃಹ ವಸತಿ ಗೃಹದಲ್ಲಿ ಅಸ್ಪಾಕ್ ತಗಡಿ (24) ಪತ್ನಿ ಎದುರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಒಂದು ವರ್ಷದ ಹಿಂದಷ್ಟೆ ಮದುವೆಯಾಗಿದ್ದ ಅಸ್ಪಾಕ್ಗೆ ಒಂದು ಮಗು ಕೂಡ ಇದೆ. ಕೇಂದ್ರ ಕಾರಾಗೃಹದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಅಸ್ಪಾಕ್, ಮೇಲಾಧಿಕಾರಿಗಳ ಬಳಿ ಒಳ್ಳೆಯ ಹೆಸರು ಪಡೆದಿದ್ದ.
ಈ ಹಿಂದೆ ಕೆ.ಎಸ್.ಆರ್.ಪಿಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದ ಅಸ್ಪಾಕ್, ಕಳೆದ ಎರಡು ವರ್ಷಗಳಿಂದ ಜೈಲು ವಾರ್ಡರ್ ಆಗಿ ಕೆಲಸ ಮಾಡುತ್ತಿದ್ದ. ಅಸ್ಪಾಕ್ ದಾಂಪತ್ಯದಲ್ಲಿ ಆರಂಭದಲ್ಲಿಯೇ ಬಿರುಕು ಕಾಣಿಸಿಕೊಂಡಿದೆ.
ಅಸ್ಪಾಕ್ ಪತ್ನಿ ಸಂಸಾರದಲ್ಲಾದ ಜಗಳದ ಹಿನ್ನಲೆಯಲ್ಲಿ ತವರು ಮನೆ ಸೇರಿಕೊಂಡಿದ್ದಳು. ನೆನ್ನೆ ಸಂಜೆ ಅಸ್ಪಾಕ್ ತನ್ನ ಪತ್ನಿ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಾನೆ.ಆ ಸಂದರ್ಭದಲ್ಲಿ ಪತ್ನಿಯ ತಂದೆ ತಾಯಿ ಕೂಡ ಅಸ್ಪಾಕ್ ಜೊತೆ ವಾಗ್ವಾದಕ್ಕಿಳಿದ್ದಾರೆ. ವಿಡಿಯೋ ಕಾಲ್ ನಲ್ಲಿಯೇ ಜಗಳ ಜೋರಾಗಿ ನಡೆದಿದೆ. ಹತಾಶಗೊಂಡ ಅಸ್ಪಾಕ್ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ.
ಇಂದು ಕಿಟಕಿ ಬಳಿ ಮೊಬೈಲ್ ಇಟ್ಟು ತಾನು ಆತ್ಮಹತ್ಯೆ ಮಾಡಿಕೊಳ್ಳುವ ದೃಷ್ಯವನ್ನು ಲೈವ್ ಆಗಿ ಪತ್ನಿ ಮತ್ತು ಅತ್ತೆ ಮಾವನಿಗೆ ತೋರಿಸಿದ್ದಾನೆ.
ಪತಿ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದಂತೆ ಇತ್ತ ಪತ್ನಿ ಶಿವಮೊಗ್ಗದ ಕಾರಾಗೃಹದ ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ.ತಕ್ಷಣ ವಸತಿ ಗೃಹದಲ್ಲಿದ್ದ ಇತರೆ ಸಿಬ್ಬಂದಿಗಳು ಮನೆ ಬಾಗಿಲು ಒಡೆದು ಹೋಗುವಷ್ಟರಲ್ಲಿ ಅಸ್ಪಾಕ್ ಪ್ರಾಣಪಕ್ಷಿ ಹಾರಿ ಹೋಗಿತ್ತು.
ನಿನ್ನೆ ಸಹೋದ್ಯೋಗಿ ಒಬ್ಬರ ಬರ್ತ್ಡೇಯಲ್ಲಿ ಪಾಲ್ಗೊಂಡಿದ್ದ ಅಸ್ಪಾಕ್ ಬಳಿಕ 8 ಗಂಟೆಗೆ ಮನೆಗೆ ತೆರಳಿದ್ದಾನೆ. ಈ ವೇಳೆ ಪತ್ನಿಯ ಜೊತೆ ವಿಡಿಯೋ ಕಾಲ್ನಲ್ಲಿ ಮಾತುಕತೆ ಆರಂಭವಾಗಿದ್ದು, ಮಾತುಕತೆ ಜಗಳಕ್ಕೆ ತಿರುಗಿದೆ.
ಪತಿ ಕಣ್ಣೆದುರುನೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಣ್ಣಾರೆ ಕಂಡ ಪತ್ನಿ ಆಘಾತಕ್ಕೊಳಗಾಗಿದ್ದಾರೆ.
ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.