ಶಿವಮೊಗ್ಗ : ನನಗೆ ಜೀರೋ ಟ್ರಾಫಿಕ್ ಅವಶ್ಯಕತೆ ಇಲ್ಲ. ನಾಲ್ಕು ಜೀಪು, ಮನೆ ತುಂಬ ಪೊಲೀಸರು ಕೊಟ್ಟಿದ್ದರು. ಅಲಂಕಾರಕ್ಕಾಗಿ ಇದೆಲ್ಲ ಬೇಡ ಎಂದು ನಾನು ಹೇಳಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ನಗರದ ಸರ್ಕಾರಿ ಭವನದಲ್ಲಿ ಇಂದು ರಾಜ್ಯ ಸೌಹರ್ದ ಸಂಯುಕ್ತ ಸಹಕಾರಿ ನಿಯಮಿತ ಹಾಗೂ ಸಹ್ಯಾದ್ರಿ ಸೌಹರ್ದ ಸಹಕಾರಿ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಗೃಹ ಸಚಿವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸನ್ಮಾನ ಸ್ವೀಕರಿಸಿ ಗೃಹ ಸಚಿವರು ಮಾತನಾಡಿದರು.
ಬಹಳ ಜನ ನನಗೆ ದಿನವೂ ಸೆಲ್ಯೂಟ್ ಹೊಡೆಯುತ್ತಾರೆ. ನನಗೆ ಈಗಲೂ ನಮಸ್ಕಾರ ಮಾಡಲು ಬರುತ್ತಿಲ್ಲ. ಎಲ್ಲರಿಗೂ ಸೆಲ್ಯೂಟ್ ಹೊಡೆದು ಹೊಡೆದು ರೂಢಿ ಆಗಿ ಹೋಗಿದೆ. ಅಲಂಕಾರಕ್ಕಾಗಿ ಇದೆಲ್ಲಾ ನನಗೆ ಬೇಡ ಎಂದು ನಮ್ಮ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದೇನೆ ಎಂದು ತಿಳಿಸಿದರು.
ನಾನು ಗೃಹ ಸಚಿವನಾಗಿ ರಿಸ್ಕಿ ಕೆಲಸ ಮಾಡುತ್ತಿರುತ್ತೇನೆ ನಿಜ. ರಿಸ್ಕ್ ತೆಗೆದುಕೊಂಡು ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನನಗೆ ಜೀರೋ ಟ್ರಾಫಿಕ್ ಬೇಡ ಅಂತಾ ನಾನು ಈ ಹಿಂದೆಯೇ ಹೇಳಿದ್ದೆ. ನಾನು ಟ್ರಾಫಿಕ್‌ನಲ್ಲಿ ನಿಂತಾಗ ನಾನೇ ಬೈದುಕೊಂಡಿದ್ದೇನೆ.
ನಮ್ಮ ಅಲಂಕಾರಕ್ಕಾಗಿ ಈ ಖುರ್ಚಿ ಇರಬಾರದು. ಹತ್ತು ನಿಮಿಷ ಲೇಟ್ ಆದರೆ, ತಲೆ ಏನು ಹೋಗುವುದಿಲ್ಲ. ಸಿಗ್ನಲ್ ಫ್ರೀ ಬಿಟ್ಟರೆ ಸಾಕು, ಆಗ ನಾವು ಪಾಸಾಗಬಹುದು. ಇನ್ನೊಬ್ಬರಿಗೆ ತೊಂದರೆ ಕೊಟ್ಟು ಜೀರೋ ಟ್ರಾಫಿಕ್ ಮಾಡಿಕೊಂಡು ಹೋಗುವುದು ನನಗೆ ಇಷ್ಟವಿಲ್ಲ ಎಂದು ಸ್ಪಷ್ಟಪಡಿಸಿದರು.