ಜಿಲ್ಲೆಯಲ್ಲಿ ಚುರುಕುಗೊಂಡ ಮತದಾನ : ಸಂಜೆಯೇ ಫಲಿತಾಂಶ ಘೋಷಣೆ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇವತ್ತು ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಇವತ್ತು ಸಂಜೆ ವೇಳೆಗೆ ಕಸಾಪ ಶಿವಮೊಗ್ಗ ಘಟಕದ ನೂತನ ಸಾರಥಿ ಯಾರು ಅನ್ನುವುದು ಗೊತ್ತಾಗಲಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ 12 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಶಿಕಾರಿಪುರದಲ್ಲಿ 4, ಶಿವಮೊಗ್ಗದಲ್ಲಿ 3, ಉಳಿದ ತಾಲೂಕುಗಳಲ್ಲಿ ತಲಾ ಒಂದು ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. 9,143 ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ 2811 ಮತದಾರರಿದ್ದಾರೆ. ಭದ್ರಾವತಿಯಲ್ಲಿ 1202, ತೀರ್ಥಹಳ್ಳಿಯಲ್ಲಿ 730, ಹೊಸನಗರದಲ್ಲಿ 1052, ಸಾಗರದಲ್ಲಿ 839, ಸೊರಬದಲ್ಲಿ 510, ಶಿಕಾರಿಪುರದಲ್ಲಿ 1999 ಮತದಾರರಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಲ್ವರು ಸ್ಪರ್ಧಿಗಳ ಮಧ್ಯೆ ಹಣಾಹಣಿ ಇದೆ. ನಿಕಟಪೂರ್ವ ಜಿಲ್ಲಾಧ್ಯಕ್ಷ ಶಂಕರಪ್ಪ ಅವರು ಮರು ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಈ ಹಿಂದೆ ಮೂರು ಭಾರಿ ಜಿಲ್ಲಾಧ್ಯಕ್ಷರಾಗಿ ಅನುಭವ ಹೊಂದಿರುವ ಡಿ.ಮಂಜುನಾಥ್ ಅವರು ಮತ್ತೊಮ್ಮೆ ಸ್ಪರ್ಧೆಗಿಳಿದಿದ್ದಾರೆ.
ಪತ್ರಕರ್ತರಾದ ಶಿ.ಜು.ಪಾಶ ಮತ್ತು ಗಾ.ರಾ.ಶ್ರೀನಿವಾಸ್ ಅವರು ಮೊದಲ ಭಾರಿ ಸ್ಪರ್ಧೆಗಿಳಿದಿದ್ದಾರೆ. ವಿನೂತನ ರೀತಿಯಲ್ಲಿ ಪ್ರಚಾರ ಮಾಡಿ ಮತದಾರರನ್ನು ಸೆಳೆಯಲು ಯತ್ನಿಸಿದ್ದಾರೆ.
ಬೆಳಗ್ಗೆ 8 ಗಂಟೆಗೆ ಆರಂಭವಾಗಿರುವ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಗೆ ಮುಕ್ತಾಯವಾಗಲಿದೆ. ಬಳಿಕ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಸಂಜೆ 6 ಗಂಟೆ ಹೊತ್ತಿಗೆ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷರು ಯಾರು ಅನ್ನುವುದು ಗೊತ್ತಾಗಲಿದೆ.
ಸದ್ಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದೆ. ಬೆಳಗ್ಗೆಯಿಂದಲೆ ಮತದಾರರು ಉತ್ಸಾಹದಿಂದ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಕಡೆ ಕ್ಷಣದಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಪ್ರಯತ್ನಿಸುತ್ತಿರುವುದು ಅಲ್ಲಲ್ಲಿ ಕಂಡು ಬಂದಿದೆ.

Leave a Reply

Your email address will not be published. Required fields are marked *