ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಹೆಚ್ಚುತ್ತಿದ್ದು ವಾಹನ ವೇಗ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕುಂಸಿ ಗ್ರಾಮಸ್ಥರು ಗುರುವಾರ ಅಪಘಾತದಿಂದ ಮೃತಪಟ್ಟ ಬಾಲಕನ ಶವವಿಟ್ಟು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಸಾಗರ ಕಡೆಯಿಂದ ಬರುತ್ತಿದ್ದ ಕಾರು ಶಾಲೆಯಿಂದ ವಾಪಸು ಮನೆಗೆ ಬರುತ್ತಿದ್ದ ಕುಂಸಿ ಗ್ರಾಮದ ಚಿಕ್ಕಣ್ಣ ದಂಪತಿಗಳ ಪುತ್ರ 9 ವರ್ಷದ ಬಾಲಕ ವೇಣುಗೋಪಾಲ್‌ಗೆ ಡಿಕ್ಕಿ ಹೊಡೆದಿತ್ತು.
ವೇಗವಾಗಿ ಬಂದ ಕಾರು ಬಾಲಕನಿಗೆ ಡಿಕ್ಕಿ ಹೊಡೆದ ನಂತರ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಹಾಗೂ ಕಬ್ಬಿನ ಗಾಣಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಿಂದ ಬಾಲಕನಿಗೆ ತೀವ್ರ ಗಾಯವಾಗಿ ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆತ ಗುರುವಾರ ಮೃತಪಟ್ಟಿದ್ದನು.
ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತವಾಗುತ್ತಿದೆ.ವೇಗ ನಿಯಂತ್ರಕ ಸೇರಿ ಇನ್ನಿತರ ಸುರಕ್ಷತಾ ಕ್ರಮ ಅಳವಡಿಸದೇ ಇರುವ ಕಾರಣ ವಾಹನಗಳು ವೇಗವಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು ಅಪಘಾತಗಳು ಹೆಚ್ಚುತ್ತಿವೆ. ಕಳೆದ 7 ವರ್ಷದಲ್ಲಿ ಅಪಘಾತದಿಂದ 20ಕ್ಕೂ ಹೆಚ್ಚಿನ ಜನ ಅಮಾಯಕರು ಸಾವನ್ನಪ್ಪಿದ್ದಾರೆ. ಹೀಗಾಗಿ ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು. ಅಲ್ಲದೆ ಗುರುವಾರ ಮೃತ ಬಾಲಕ ವೇಣುಗೋಪಾಲ್ ಶವವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದರು.
ವಿಷಯ ತಿಳಿಯುತಿದ್ದಂತೆ ಪ್ರತಿಭಟನಾ ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.