ರಿಪ್ಪನ್ ಪೇಟೆ. ಜು.21: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಇಂದು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಸರಕಾರದ ಹೊಸ ಮಾರ್ಗಸೂಚಿಯಂತೆ ರಿಪ್ಪನ್ ಪೇಟೆ ಹಾಗೂ ಕೆಂಚನಾಲ,ಗರ್ತಿಕೆರೆ,ಎಣ್ಣೆನೊಡ್ಲು,ಗಾಳಿಬೈಲು ಮಸೀದಿಗಳಲ್ಲಿ ಬಕ್ರೀದ್ ಹಬ್ಬ ಆಚರಿಸಲಾಯಿತು. ಆಯಾ ಮಸೀದಿಗಳಲ್ಲಿ ಸೇರುವ ಜನರ ಸಾಮಥ್ರ್ಯಕ್ಕೆ ಅನುಗುಣವಾಗಿ ಶೇ.50ನ್ನು ಮೀರದಂತೆ ಹಂತ ಹಂತವಾಗಿ ಸಾಮೂಹಿಕ ನಮಾಜ್ ನೆರವೇರಿತು.
ಮುಸ್ಲಿಂ ಭಾಂಧವರು ಜಗತ್ತಿನಲ್ಲಿ ವ್ಯಾಪಿಸಿರುವ ಕೊರೊನಾ ಮಹಮಾರಿ ಶೀಘ್ರ ರೋಗಮುಕ್ತವಾಗಬೇಕು,ಜಗತ್ತಿನಲ್ಲೆಡೆ ಶಾಂತಿ ಪಸರಿಸಬೇಕು ಎಲ್ಲರೂ ನೆಮ್ಮದಿಯಿಂದ ಬದುಕುವಂತಾಗಬೇಕು ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಾಸ್ಕ್ ಧಾರಣೆ ಕಡ್ಡಾಯವಾಗಿತ್ತು, 65 ವರ್ಷ ಪ್ರಾಯ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕೆಳಗಿನವರು ಮಸೀದಿಗೆ ಪ್ರವೇಶವಿರಲಿಲ್ಲ,ಪರಸ್ಪರ ಆಲಿಂಗನವಿಲ್ಲದೆ ಶುಭಾಶಯ ವಿನಿಮಯಗಳಷ್ಟೇ ಕಂಡು ಬಂತು.
ಜಿಲ್ಲಾಡಳಿತದ ನಿರ್ದೇಶನದಂತೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡದೇ ಸ್ಥಳೀಯ ಮಸೀದಿಗಳಲ್ಲಿಯೇ ಪ್ರಾರ್ಥನೆ ನಡೆಸಿದರು.ಪ್ರತಿ ಮಸೀದಿಗಳಲ್ಲಿ 50 ರಷ್ಟು ಜನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಗುಂಪು ಸೇರಲು ಯಾವುದೇ ಅವಕಾಶವಿರಲಿಲ್ಲ.
ಬಕ್ರೀದ್ ತ್ಯಾಗ ಬಲಿದಾನದ ಸಂಕೇತ. ಭಾರತವೂ ಸೇರಿದಂತೆ ವಿಶ್ವದ್ಯಾಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್ ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್ ಉಲ್ ಅದಾ ಅರ್ಥಾತ್ ಬಕ್ರೀದ್ ಎಂದು ಆಚರಿಸಲಾಗುತ್ತಿದೆ.
ಕಳೆದೆರಡು ವರ್ಷಗಳಿಂದ ಕೊರೋನಾ ಎಲ್ಲರ ಹಬ್ಬದ ಸಂಭ್ರಮವನ್ನು ಕಸಿದುಕೊಂಡಿದೆ. ಬುಧವಾರ ಮುಂಜಾನೆಯಿಂದಲೇ ಹೊಸ ಬಟ್ಟೆ ತೊಟ್ಟು ತಮಗೆ ಸಮೀಪವಿರುವ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದೂರದಲ್ಲೇ ನಿಂತು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಸಂಧರ್ಭದಲ್ಲಿ ಎಲ್ಲಾ ಮಸೀದಿಯ ಧರ್ಮಗುರುಗಳು ಹಾಗೂ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ರಫ಼ಿ,ಗಾಳಿಬೈಲು ಜುಮ್ಮಾ ಮಸೀದಿ ಅಧ್ಯಕ್ಷರಾದ ಜಿ ಕೆ ಜಾವೀದ್ ಕೆಂಚನಾಲ ಜುಮ್ಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ಘನೀಸಾಬ್ ಹಾಗೂ
ಮುಖಂಡರುಗಳಾದ ಅರ್ ಎ ಚಾಬುಸಾಬ್,ಮಹಮ್ಮದ್ ಷರೀಪ್ ಗಾಳಿಬೈಲ್,ಅಮೀರ್ ಹಂಜಾ, ಆಸೀಫ಼್ ಭಾಷಾಸಾಬ್,ಉಬೇದುಲ್ಲಾ ಷರೀಫ್,ಬಶೀರ್ ಅಹಮದ್ ಗರ್ತಿಕೆರೆ,ಎಂ ಹೆಚ್ ಮುಸ್ತಾಫಾ,ಖಲೀಲ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ರಿಪ್ಪನ್ ಪೇಟೆ ವರದಿ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..